News Kannada
Tuesday, December 06 2022

ಕರ್ನಾಟಕ

ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯರ ಪುಣ್ಯಸ್ಮರಣಾ ದಿನ : ವೀರಯೋಧನಿಗೆ ಪುಷ್ಪನಮನ

Photo Credit :

ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯರ ಪುಣ್ಯಸ್ಮರಣಾ ದಿನ : ವೀರಯೋಧನಿಗೆ ಪುಷ್ಪನಮನ

ಮಡಿಕೇರಿ: ಭಾರತ-ಪಾಕ್ ನಡುವೆ ಐದೂವರೆ ದಶಕಗಳ ಹಿಂದೆ 1965ರಲ್ಲಿ ನಡೆದ  ಯುದ್ಧದಲ್ಲಿ ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಬಲಿದಾನ ಗೈದ ಕೊಡಗಿನ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯರ 54ನೇ  ಪುಣ್ಯಸ್ಮರಣಾ ಕಾರ್ಯಕ್ರಮ, ನಗರದ ಖಾಸಗಿ ಬಸ್ ನಿಲ್ದಾಣದ ವೀರಯೋಧನ ವೃತ್ತದಲ್ಲಿ ಪುಷ್ಪನಮನ ಸಲ್ಲಿಸುವ ಮೂಲಕ ಭಾವಪೂರ್ಣವಾಗಿ ನಡೆಯಿತು.

ಕೊಡವ ಮಕ್ಕಡ ಕೂಟ ಮತ್ತು ಅಜ್ಜಮಾಡ ದೇವಯ್ಯ ಕುಟುಂಬಸ್ಥರ ಸಹಯೋಗದಲ್ಲಿ ನಗರದ ಖಾಸಗಿ ಬಸ್ ನಿಲ್ದಾಣದ ಬಳಿಯ ದೇವಯ್ಯ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೀರ ಯೋಧನ ಭಾವಚಿತ್ರಕ್ಕೆ ಅಜ್ಜಮಾಡ ಕುಟುಂಬಸ್ಥರು, ಮಾಜಿ ಸೈನ್ಯಾಧಿಕಾರಿಗಳು, ಮಾಜಿ ಯೋಧರು, ಜನಪ್ರತಿನಿಧಿಗಳು ಹಾಗೂ  ಹಲವು ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.

 ಈ ಸಂದರ್ಭ ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ ಮಾತನಾಡಿ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರು ತಮ್ಮ ಸಾಹಸ ಕಾರ್ಯಾಚರಣೆಯ ಮೂಲಕ ದೇಶ ರಕ್ಷಣೆಗಾಗಿ ಬಲಿದಾನಗೈದ ಮಹಾನ್ ವ್ಯಕ್ತಿಯಾಗಿದ್ದು, ಕೊಡಗಿನ ಹೆಮ್ಮೆಯ ಪುತ್ರರಾಗಿದ್ದಾರೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ಜಿಲ್ಲೆಯ ಮಂದಿ ಹೊರ ಪ್ರದೇಶಗಳಿಗೆ ತೆರಳುವ ಸಂದರ್ಭ  ಅವರನ್ನು ಕೊಡಗಿನವರೆಂದು ಗುರುತಿಸುವುದೇ ಹೆಮ್ಮೆಯ ವಿಷಯ. ಈ ಗೌರವವನ್ನು ನಮ್ಮ ಹಿರಿಯರು ಸೈನ್ಯ ಮತ್ತು ಇತರೆ ಕ್ಷೇತ್ರಗಳಲ್ಲಿನ ಸಾಧನೆಯಿಂದ ನಮಗೆ ಸಂಪಾದಿಸಿಕೊಟ್ಟಿದ್ದಾರೆ. ಅದನ್ನು ನಾವು ಉಳಿಸಿಕೊಂಡು ಹೋಗಬೇಕಿದೆ. ಸ್ಕ್ವಾಡ್ರನ್ ಲೀಡರ್ ದೇವಯ್ಯ ಅವರ ಸಾಹಸ, ದೇಶ ಪ್ರೇಮ ಯುವ ಪೀಳಿಗೆಗೆ  ಆದರ್ಶಪ್ರಾಯವಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಕೊಡಗು ವೀರ ಯೋಧರ ನಾಡು, ಕೊಡಗಿನ ಅನೇಕರು ಸೇನೆಗೆ ಸೇರಿ ದೇಶಕ್ಕಾಗಿ ಹಾಗೂ ನಾಡಿನ ಜನತೆಯ ರಕ್ಷಣೆಗಾಗಿ ಬಲಿದಾನಗೈದಿದ್ದು, ಇದು ಯುವ ಪೀಳಿಗೆಗೆ ಮಾದರಿಯಾಗಬೇಕು ಮತ್ತು ಕೊಡಗಿನ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರುವಂತಾಗಬೇಕು ಎಂದರು.

    ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷರಾದ ನಿವೃತ್ತ ಕರ್ನಲ್ ಕಂಡ್ರತಂಡ ಸುಬ್ಬಯ್ಯ, 1965ರಲ್ಲಿ ಇಂಡೋ ಪಾಕ್ ಸಮರದಲ್ಲಿ ಸ್ಕ್ವಾಡ್ರನ್ ಲೀಡರ್ ದೇವಯ್ಯನವರು ಶತ್ರು ರಾಷ್ಟ್ರದ ಆಧುನಿಕ ಎಫ್16 ಯುದ್ಧ ವಿಮಾನವನ್ನು ತಮ್ಮ ಸಾಧಾರಣ ಯುದ್ಧ ವಿಮಾನದ ಮೂಲಕ ಹೊಡೆದುರುಳಿಸಿ, ತಾವೂ ವೀರಮರಣವನ್ನಪ್ಪುವ ಮೂಲಕ  ಚರಿತ್ರೆಯನ್ನೇ ನಿರ್ಮಿಸಿದ್ದಾರೆ. ಅವರ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಮರಣಾನಂತರ ಮಹಾವೀರ ಚಕ್ರ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಿ  ಗೌರವಿಸಿತೆಂದು ತಿಳಿಸಿದರು.

          ಇಂತಹ ವೀರಸೇನಾನಿಯ ಪ್ರತಿಮೆಯನ್ನು ಸ್ಥಾಪಿಸಬೇಕಿರುವ ಈ ಹಳೇ ಬಸ್ ನಿಲ್ದಾಣವನ್ನು ಮಡಿಕೇರಿ ಸ್ಕ್ವೆಯರ್ ಆಗಿ ಪರಿವರ್ತಿಸುವ ಪ್ರಯತ್ನ ಸರಿಯಲ್ಲ. ಇದನ್ನು ಸ್ಕ್ವಾಡ್ರನ್ ಲೀಡರ್ ದೇವಯ್ಯ ಸ್ಕ್ವೇಯರ್ ಆಗಿ ಅಸ್ತಿತ್ವಕ್ಕೆ ತರುವುದು ಹೆಚ್ಚು ಸೂಕ್ತವೆಂದು ತಿಳಿಸಿ, ಮಹಾನ್ ಯೋಧನ ಬಗ್ಗೆ  ಜಿಲ್ಲೆಯ ಜನತೆ ಅರಿತು ಗೌರವಿಸುವಂತಾಗಬೇಕೆಂದು ಆಶಿಸಿದರು.

See also  ಬೇಬಿಬೆಟ್ಟದ ಗಣಿಗಾರಿಕೆಗೆ ಮಠದ ಗೋಡೆಗಳಲ್ಲಿ ಬಿರುಕು

          ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ ಸಂಚಾಲಕ ನಿವೃತ್ತ ಮೇಜರ್ ಬಿ.ಎ. ನಂಜಪ್ಪ ಅವರು ಮಾತನಾಡಿ, ಭಾರತ-ಪಾಕಿಸ್ತಾನದ ಯುದ್ಧದ ಸಂದರ್ಭ ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ತಮ್ಮ ಹಳೆಯ ವಿಮಾನದ ಮೂಲಕ ಕೆಡಹುವ ಮೂಲಕ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರು ಆ ಸಂದರ್ಭ ವೀರಮರಣವನ್ನಪ್ಪುತ್ತಾರೆ. ಈ ವಿಚಾರವನ್ನು ಆ ಸಂದರ್ಭ ಪಾಕ್ ಸೇನೆಯ ಯುದ್ಧ ವಿಮಾನದ ಪೈಲಟ್ ಆಗಿದ್ದ ಅಮ್ಜದ್ ಹುಸೇನ್ ಅವರು ನಂತರದ ದಿನಗಳಲ್ಲಿ ತಿಳಿಸಿದ್ದಲ್ಲದೆ, ವಿಮಾನದ ಎರಡೂ ರೆಕ್ಕೆಗಳಿಗೆ ಬೆಂಕಿ ತಗುಲಿದ್ದರು ಅದರ ಮೂಲಕವೇ ಯುದ್ಧ ಮಾಡಿದ ಸ್ಕ್ವಾ.ಲೀ. ದೇವಯ್ಯ ಅವರ ಸಾಹಸವನ್ನು ಸ್ಮರಿಸಿಕೊಂಡು, ‘ವಿಂಗ್ಸ್ ಆಫ್ ಫಯರ್’ ಎಂದು  ಉದ್ಘರಿಸಿದ್ದರೆಂದು  ಮಹಾನ್ ಯೋಧನ ಸಾಹಸವನ್ನು ಸ್ಮರಿಸಿಕೊಂಡರು.

          ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಸ್ಮಾರಕ ಟ್ರಸ್ಟ್‍ನ ಪ್ರಮುಖರಾದ ಅಜ್ಜಮಾಡ ಕಟ್ಟಿ ಮಂದಯ್ಯ ಮಾತನಾಡಿ, ಈಗಾಗಲೆ ಮಹಾನ್ ಯೋಧನ ವಿಗ್ರಹವನ್ನು ನಿರ್ಮಿಸಲಾಗಿದ್ದು, ಮಳೆಗಾಲದ ಬಳಿಕ ಅದನ್ನು ಈ ವೃತ್ತದಲ್ಲಿ ಸ್ಥಾಪಿಸುವ ಬಗ್ಗೆ ಚಿಂತನೆಗಳನ್ನು ನಡೆಸಲಾಗಿದೆಯೆಂದು ಮಾಹಿತಿ ನೀಡಿದರು.

   ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಮಳೆ ಕಡಿಮೆಯಾದ ತಕ್ಷಣ ಸ್ವ್ಕಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ವಿಗ್ರಹ ಸ್ಥಾಪನೆಗೆ ಶಂಕು ಸ್ಥಾಪನೆ ನೆರವೇರಿಸಿ, ಇದೇ ಡಿ.24 ರಂದು ವಿಗ್ರಹವನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎ.ಪಿ.ಕುಶಾಲಪ್ಪ, ಎ.ಎಸ್.ನಂಜಪ್ಪ, ಎ.ಎನ್. ಬೆಳ್ಯಪ್ಪ, ಎ.ಎಂ.ರಮೇಶ್ ಹಾಗೂ ಅಜ್ಜಮಾಡ ಕುಟುಂಬಸ್ಥರು ಹಾಜರಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು