News Kannada
Friday, December 09 2022

ಕರ್ನಾಟಕ

ಶಾಶ್ವತ ಸೂರಿಗೆ ಆಗ್ರಹ : ಸಿದ್ದಾಪುರದಲ್ಲಿ ಬೃಹತ್ ಪ್ರತಿಭಟನೆ

Photo Credit :

ಶಾಶ್ವತ ಸೂರಿಗೆ ಆಗ್ರಹ : ಸಿದ್ದಾಪುರದಲ್ಲಿ ಬೃಹತ್ ಪ್ರತಿಭಟನೆ

ಮಡಿಕೇರಿ: ಮಹಾಮಳೆಗೆ ಪ್ರವಾಹ ಸೃಷ್ಟಿಯಾಗಿ ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಗುಹ್ಯ ಹಾಗೂ ಕರಡಿಗೋಡು ಭಾಗದಲ್ಲಿ ನೂರಾರು ಮನೆಗಳು ಕುಸಿದು, ಹಲವು ಕುಟುಂಬಗಳು ನೆಲೆ ಕಳೆದುಕೊಂಡಿವೆ. ಮಳೆಹಾನಿ ಸಂಭವಿಸಿ 50 ದಿನಗಳೇ ಕಳೆದರೂ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಸೂಚಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ನಿರಾಶ್ರಿತರ ಹೋರಾಟ ಸಮಿತಿ ಸಿದ್ದಾಪುರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.

  ಹಳೆ ಸಿದ್ದಾಪುರದಿಂದ ಬಸ್ ನಿಲ್ದಾಣದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ಸಂತ್ರಸ್ತರು “ನಮ್ಮ ಭೂಮಿ ನಮ್ಮ ಹಕ್ಕು, ಭಿಕ್ಷೆಯಲ್ಲ ಭಿಕ್ಷೆಯಲ್ಲ” ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.  ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವಂತೆ ಪಟ್ಟು ಹಿಡಿದ ಪ್ರತಿಭಟನಾಕಾರರು ಬಸ್ ನಿಲ್ದಾಣದಲ್ಲಿ ಸಭೆ ನಡೆಸಿದರು.

   ಪ್ರತಿಭಟನಾ ಸಭೆಯಲ್ಲಿ ಗುಹ್ಯ ಹೋರಾಟ ಸಮಿತಿಯ ರೆಜಿತ್ ಕುಮಾರ್ ಗುಹ್ಯ, ಚಂದ್ರನ್, ಕರಡಿಗೋಡು ಹೋರಾಟ ಸಮಿತಿಯ ಯಮುನ, ಬೈಜು, ನೆಲ್ಯಹುದಿಕೇರಿ ಹೋರಾಟ ಸಮಿತಿಯ ಪಿ.ಆರ್ ಭರತ್, ಸಫಿಯಾ ಮೊಹಮ್ಮದ್, ಸಾಮಾಜಿಕ ಕಾರ್ಯಕರ್ತ ಎ.ಎಸ್ ಮುಸ್ತಫ, ಹೆಚ್.ಆರ್.ಎಸ್ ಸಂಸ್ಥೆಯ ಗಫೂರ್, ಕೊಂಡಂಗೇರಿಯ ಅಬ್ದುಲ್ ರೆಹ್ಮಾನ್, ನಮ್ಮ ಕೊಡಗು ತಂಡದ ನೌಶಾದ್, ದಲಿತ ಸಂಘರ್ಷ ಸಮಿತಿಯ ಕೆ.ಬಿ.ರಾಜು ಮಾತನಾಡಿದರು.

ಸ್ಥಳಕ್ಕೆ ಆಗಮಿಸಿದ ವಿರಾಜಪೇಟೆ ತಾಲ್ಲೂಕು ತಹಶೀಲ್ದಾರ್ ಪುರಂದರ ಅವರು ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರಾದರೂ ಜಿಲ್ಲಾಧಿಕಾರಿಗಳು ಬರಬೇಕೆನ್ನುವ ಒತ್ತಡ ಹೆಚ್ಚಾಯಿತು.

 

  ಸ್ಥಳಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೆಕರ್ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಸಮಾಲೋಚಿಸಿದರು.

 ನಿರಾಶ್ರಿತರಿಗೆ ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರಕಾರಿ ಜಾಗವನ್ನು ಗುರುತಿಸಿ, ಶೀಘ್ರದಲ್ಲಿ ನಿವೇಶನ ಕಲ್ಪಿಸಬೇಕು. ಇದಕ್ಕೆ ಜಿಲ್ಲಾಡಳಿತಕ್ಕೆ ಎಷ್ಟು ಕಾಲಾವಕಾಶ ಬೇಕು ಎಂಬುದನ್ನು ನಿರಾಶ್ರಿತರಿಗೆ ತಿಳಿಸುವುದು. ನಿವೇಶನ ಕಲ್ಪಿಸಿದ ಬಳಿಕ ಮನೆ ಕಟ್ಟಲು ರೂ.5 ಲಕ್ಷ ನೀಡುವುದಾಗಿ ಸರಕಾರ ಘೋಷಿಸಿದೆ. ಪ್ರತಿಯೊಂದು ವಸ್ತುಗಳ ಬೆಲೆ ಗಗನಕ್ಕೇರಿದ್ದು, 5 ಲಕ್ಷದಲ್ಲಿ ಮನೆ ನಿರ್ಮಿಸುವುದು ಅಸಾಧ್ಯವಾಗಿರುವುದರಿಂದ ರೂ 10 ಲಕ್ಷ ನೀಡಬೇಕು. ಗುಹ್ಯ ಕರಡಿಗೋಡು ಭಾಗದ 60 ಕ್ಕೂ ಹೆಚ್ಚು ನಿರಾಶ್ರಿತರಿಗೆ ತಾತ್ಕಾಲಿಕ ಪರಿಹಾರವಾದ ರೂ.10 ಸಾವಿರ ಇನ್ನು ಲಭಿಸಿಲ್ಲ. ಕೂಡಲೇ ತಾತ್ಕಾಲಿಕ ಪರಿಹಾರ ನೀಡಬೇಕು. ಶೇಕಡ 50ಕ್ಕಿಂತ ಹೆಚ್ಚಾಗಿ ಹಾನಿಗೊಳಗಾಗಿರುವ ಮನೆಗಳನ್ನು ಪೂರ್ಣ ಹಾನಿ ಎಂದು ಪರಿಗಣಿಸಬೇಕು ಸೇರಿದಂತೆ ವಿವಿಧ ಭೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು. ಅಲ್ಲದೆ ನಿರಾಶ್ರಿತರಲ್ಲಿ ಆತಂಕ ಹಾಗೂ ಗೊಂದಲ ಸೃಷ್ಟಿಯಾಗುವಂತ ಪತ್ರದಲ್ಲಿ ಕಂದಾಯ ಅಧಿಕಾರಿಗಳು ನಿರಾಶ್ರಿತರಿಂದ ಸಹಿ ಪಡೆಯುತ್ತಿರುವುದರ ಬಗ್ಗೆ ಹೋರಾಟ ಸಮಿತಿಯ ರೆಜಿತ್ ಕುಮಾರ್ ಜಿಲ್ಲಾಧಿಕಾರಿಗಳ ಗಮನ ಸೆಳೆದರು.

   ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಕಂದಾಯ ಅಧಿಕಾರಿಗಳು ನೀಡುತ್ತಿರುವ ಪತ್ರವು ಸರಕಾರದ ಪತ್ರವಾಗಿದೆ. ಅದರಲ್ಲಿ ಎರಡು ರೀತಿಯ ಪತ್ರಗಳಿದ್ದು, ಒಂದು ಪತ್ರ ಸಿದ್ದಾಪುರ ಮತ್ತು ನೆಲ್ಯಹುದಿಕೇರಿ ಭಾಗಕ್ಕೆ ಒಳಪಡುವುದಿಲ್ಲ ಆ ಪತ್ರದಲ್ಲಿ ಯಾರಾದರು ಸಹಿ ಮಾಡಿದ್ದಲ್ಲಿ ಅದನ್ನು ಸಂಬಂಧಪಟ್ಟ ಅಧಿಕಾರಿಗಳು ಮರಳಿ ನೀಡುವಂತೆ ಸೂಚಿಸಿದರು. ಮತ್ತೊಂದು ಪತ್ರದಲ್ಲಿ ಅನಧಿಕೃತ ಜಾಗಗಳಲ್ಲಿ ವಾಸ ಮಾಡಿರುವವರಿಗೆ ಸರಕಾರದ ವತಿಯಿಂದ ಸೂರು ನೀಡಬೇಕೆಂದು ಉಲ್ಲೇಖ ಮಾಡಲಾಗಿದ್ದು, ಆ ಪತ್ರದಲ್ಲಿ ನಿರಾಶ್ರಿತರು ಕಡ್ಡಾಯವಾಗಿ ಸಹಿ ಮಾಡಬೇಕೆಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

See also  ಮಳೆಗಾಲದಲ್ಲಿ ಆರೋಗ್ಯ ಕಾಪಾಡುವ ಕೊಡಗಿನ ಆಹಾರಗಳು

 ಮನೆ ನಿರ್ಮಾಣಕ್ಕೆಂದು ಸರಕಾರ ರೂ.5 ಲಕ್ಷ ಘೋಷಣೆ ಮಾಡಿರುವುದರಿಂದ ರೂ 10 ಲಕ್ಷದ ಬೇಡಿಕೆಯ ಮನವಿ ಪತ್ರವನ್ನು ಸರಕಾರಕ್ಕೆ ಕಳುಹಿಸಲಾಗುವುದು. ತಾತ್ಕಾಲಿಕ ಪರಿಹಾರವಾದ ರೂ.10 ಸಾವಿರವನ್ನು ಇನ್ನು ಲಭಿಸದೆ ಉಳಿದಿರುವ ನಿರಾಶ್ರಿತರಿಗೆ ಕೂಡಲೇ ವಿತರಿಸುವಂತೆ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು. ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ದಾಖಲೆಗಳನ್ನು ಕಳೆದುಕೊಂಡಿರುವ ನಿರಾಶ್ರಿತರಿಗಾಗಿ ಮುಂದಿನ ಎರಡು ದಿನಗಳಲ್ಲಿ ಸಮೀಪದ ಶಾಲೆಗಳಲ್ಲಿ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದ ಜಿಲ್ಲಾಧಿಕಾರಿಗಳು ಸೋಮವಾರಪೇಟೆ ಹಾಗೂ ವಿರಾಜಪೇಟೆ ತಾಲ್ಲೂಕಿನಲ್ಲಿ ಸರಕಾರಿ ಜಾಗವನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು. ಜಾಗವನ್ನು ಗುರುತಿಸಿ, ಸಂತ್ರಸ್ತರಿಗೆ ಹಂಚಿಕೆ ಮಾಡಲು ಕನಿಷ್ಠ ಮೂರು ತಿಂಗಳಾದರು ಬೇಕಾಗುತ್ತದೆ ಎಂದು ತಿಳಿಸಿದರು.

 ಪ್ರತಿಭಟನೆಯಲ್ಲಿ ಗುಹ್ಯ ಹೋರಾಟ ಸಮಿತಿಯ ಅಧ್ಯಕ್ಷ ಸಿ.ಯು ಮುಸ್ತಫ, ಸಮಿತಿಯ ಪ್ರಮುಖರಾದ ಕೃಷ್ಣ, ಹರಿಹರ, ಹಸ್ಸನ್, ಸುರೇಶ್, ಸುಜಾತಾ, ಧನ್ಯ, ಗ್ರಾ.ಪಂ ಸದಸ್ಯರಾದ ಪ್ರತಿಮಾ ಚಂದ್ರಶೇಖರ್, ಶೈಲ, ಶಿವಕುಮಾರ್, ಅಬ್ದುಲ್ ಖಾದರ್, ಹುಸೈನ್, ಕರ್ಪಯ್ಯ, ಪ್ರೇಮ, ಶೌಕತ್ ಅಲಿ, ಪೂವಮ್ಮ, ಶೀಲ, ಶಾರಧ ವಿವಿಧ ರಾಜಕೀಯ ಪಕ್ಷದ ಹಾಗೂ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.

  ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಪಿ.ಎಸ್.ಐ ದಯಾನಂದ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು