News Kannada
Monday, December 05 2022

ಕರ್ನಾಟಕ

ಕೈಗಾದಲ್ಲಿ ಹೊಸ ಘಟಕ ಕೈಬಿಡಿ: ಪ್ರಧಾನಿಗೆ ಸ್ವರ್ಣವಲ್ಲಿ ಶ್ರೀಗಳ ಪತ್ರ

Photo Credit :

ಕೈಗಾದಲ್ಲಿ ಹೊಸ ಘಟಕ ಕೈಬಿಡಿ: ಪ್ರಧಾನಿಗೆ ಸ್ವರ್ಣವಲ್ಲಿ ಶ್ರೀಗಳ ಪತ್ರ

ಕಾರವಾರ: ಅಣುವಿದ್ಯುತ್ ನಿಗಮವು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೈಗಾದಲ್ಲಿ ಸ್ಥಾಪಿಸಲು ಉದ್ದೇಶಿಸುವ ಐದು ಮತ್ತು ಆರನೇ ಅಣು ವಿದ್ಯುತ್ ಘಟಕಗಳಿಗೆ, ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಮಂತ್ರಾಲಯವು ಪರಿಸರ ನಿರಾಪೇಕ್ಷಣಾ ಪತ್ರ ನೀಡಿದೆ. ಆರಂಭದಿಂದಲೂ ಕೈಗಾ 5-6 ನೇ ಘಟಕ ಸ್ಥಾಪನೆ ವಿರೋಧಿಸುತ್ತಿರುವ ನಮಗೆ ಇದು ಆಘಾತಕಾರಿ ವಿಷಯವಾಗಿದೆ. ತಕ್ಷಣ ಆದೇಶ ಹಿಂಪಡೆದು, ಯೋಜನೆ ರದ್ದುಗೊಳಿಸಬೇಕು‌ ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಪ್ರಧಾನಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಕೈಗಾ ಸುತ್ತಮುತ್ತಲಿನ ಜನರ ಆರೋಗ್ಯ ಪರಿಸ್ಥಿತಿ ವೇಗವಾಗಿ ಹದಗೆಡುತ್ತಿದೆ. ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳು ಹೆಚ್ಚುತ್ತಿವೆ. ಕೈಗಾ ಸುತ್ತಮುತ್ತಲ ಗಾಳಿ, ನೀರು, ಜಲಚರ, ಸಸ್ಯಗಳು ವಿಕಿರಣಯುಕ್ತವಾಗಿದ್ದು, ಅವನ್ನು ಸೇವಿಸುವ ಜನರ ಪರಿಸ್ಥಿತಿ ಏನು ಎಂಬುದರ ಕುರಿತು ನೈಜ ಮಾಹಿತಿ ಜನರಿಗೆ ತಲುಪುತ್ತಿಲ್ಲ. ಮುಂಬೈ ಟಾಟಾ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯು ನಡೆಸುತ್ತಿದೆ ಎನ್ನಲಾಗುವ ವರದಿಯು ಇನ್ನೂ ಸಾರ್ವಜನಿಕರಿಗೆ ಲಭ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ಮತ್ತೆ ಹೊಸ ಅಣುವಿದ್ಯುತ್ ಘಟಕಗಳನ್ನು ಸ್ಥಾಪಿಸುವುದು ಸರಿಯಲ್ಲ.

ಕೈಗಾ ಅಣುವಿದ್ಯುತ್ ಘಟಕಗಳು ಕಾಳಿ ನೀರನ್ನು ಬಳಸಿಕೊಂಡು, ಪುನಃ ಆ ನೀರನ್ನು ಕಾಳಿ ನದಿಗೆ ಬಿಡುತ್ತದೆ. ವಿಕಿರಣಯುಕ್ತ ಈ ನೀರು ಕಾಳಿ ನದಿಯ ಮತ್ತು ಕಾರವಾರದ ಸಮುದ್ರದಲ್ಲಿ ಸಿಗುವ ಮೀನು,ಏಡಿ, ಸೀಗಡಿ, ಬೆಳಚೆಯಂಥ ಜಲಚರಗಳ ದೇಹವನ್ನು ಸೇರುತ್ತಿವೆ. ಈ ಮೀನನ್ನು ಸೇವಿಸುವ ಜನರ ಆರೋಗ್ಯ ಏನಾಗುತ್ತಿದೆ? ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ಇಲ್ಲ. ಇಂತಹ ಸಂದರ್ಭದಲ್ಲಿ ಮತ್ತೆ ಹೊಸ ಅಣುವಿದ್ಯುತ್ ಘಟಕಗಳನ್ನು ಸ್ಥಾಪಿಸುವುದು ಸರಿಯಲ್ಲ.

ಕೈಗಾ ಪ್ರದೇಶವು ಅಮೂಲ್ಯ ಕಾಡಿರುವ ಪಶ್ಚಿಮಘಟ್ಟದ ತಪ್ಪಲಿನ ಪ್ರದೇಶ. ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಮಂತ್ರಾಲಯವೇ ಈ ಪ್ರದೇಶವನ್ನು (ಕೆರವಡಿ, ಕದ್ರಾ, ಮಲ್ಲಾಪುರ, ಕೈಗಾ ಇತ್ಯಾದಿ ಗ್ರಾಮ ಪಂಚಾಯತ ಪ್ರದೇಶ) ಪರಿಸರ ಸೂಕ್ಷ್ಮಪ್ರದೇಶವೆಂದು ಅಧಿಕೃತವಾಗಿ ಘೋಷಿಸಿ ಗೆಜೆಟ್ ಪ್ರಕಟಣೆ ಮಾಡಿದೆ. ಇಂಥ ಸೂಕ್ಷ್ಮ ಪರಿಸರದಲ್ಲಿ ಅಣುವಿದ್ಯುತ್ ಘಟಕ ಸ್ಥಾಪಿಸಿರುವದೇ ತಪ್ಪು. ಅವುಗಳ ಮುಂದಿನ ವಿಸ್ತರಣೆ ಸರಿಯಲ್ಲ.

ಮಳೆ-ಬೆಳೆ ದೃಷ್ಟಿಯಿಂದ ಈ ಜಿಲ್ಲೆಯ ಪರಿಸರದ ಹಿತಕಾಯುವ ಮತ್ತು ಕಾಳಿ ನದಿಗೆ ಸದಾ ನೀರುಣಿಸುವ ಅಣಶಿ ಹುಲಿ ರಕ್ಷಿತಾರಣ್ಯ, ರಾಷ್ಟ್ರೀಯ ಉದ್ಯಾನವನ, ದಾಂಡೇಲಿ ಅಭಯಾರಣ್ಯ ಇವೆಲ್ಲ ಕೈಗಾ ಪಕ್ಕದಲ್ಲಿಯೇ ಇವೆ. ಇಲ್ಲಿ ಅಪಾರ ಸಂಖ್ಯೆಯ ಅಪರೂಪದ ಸಸ್ಯ-ಪ್ರಾಣಿ ಜೀವವೈವಿಧ್ಯವಿದೆ. ಇವುಗಳ ಮೇಲೆ ಅಣುವಿಕಿರಣ ಉಂಟುಮಾಡುತ್ತಿರುವ ಘೋರಪರಿಣಾಮಗಳನ್ನು ಇದುವರೆಗೆ ಅಧ್ಯಯನ ಮಾಡಲಾಗಿಲ್ಲ. ಆದರೂ, ಸಾರ್ವಜನಿಕರಿಗೆ ಮಾಹಿತಿಯಿಲ್ಲ. ಹೀಗಿರುವಾಗ, ಪುನಃ ಅಣುವಿದ್ಯುತ್ತಿನ ಹೊಸ ಘಟಕಗಳ ಸ್ಥಾಪನೆ‌ ಸೂಕ್ತವಲ್ಲ ಎಂದಿದ್ದಾರೆ.

ಕದ್ರಾದಿಂದ ಅಪಾರ ಪ್ರಮಾಣದಲ್ಲಿ ಕಾಳಿ ನೀರನ್ನು ಈಗಾಗಲೇ ಕೈಗಾ ಘಟಕಗಳು ಬಳಸುತ್ತಿವೆ. ಹೊಸ ಘಟಕಗಳು ಮತ್ತುಷ್ಟು ಹೆಚ್ಚು ನೀರನ್ನು ಬಳಸುತ್ತವೆ. ಇದರಿಂದ ಕಾಳಿನದಿಯಲ್ಲಿ ನೈಸರ್ಗಿಕ ನೀರಿನ ಹರಿವು ಮತ್ತಷ್ಟು ಕಡಿಮೆಯಾಗುತ್ತದೆ. ಈಗಾಗಲೇ ಅಣುವಿದ್ಯುತ್ತಿಗೆ ಬೇಕಾಗುವ ಯುರೇನಿಯಂ ಅಭಾವ ತಲೆದೋರಿದೆ. ಹೀಗಾಗಿ, ಹಿಂದೊಮ್ಮೆ ಪರೀಕ್ಷಾರ್ಥ ಗಣಿಗಾರಿಕೆ ಮಾಡಿದ್ದ ಯಲ್ಲಾಪುರದ ಅರೇಬೈಲ್ ಘಟ್ಟದಲ್ಲಿ ಮತ್ತೊಮ್ಮೆ ಯುರೇನಿಯಂ ಗಣಿಗಾರಿಕೆ ಆರಂಭವಾಗಿ, ಮತ್ತುಷ್ಟು ಪರಿಸರ ಸಮಸ್ಯೆಗಳು ತಲೆದೋರಬಹುದು. ಆದ್ದರಿಂದ ಅಪಾಯಕಾರಿ ಯುರೇನಿಯಂ ಗಣಿಗಾರಿಕೆಗೆ ದಾರಿ ಮಾಡಿಕೊಡುವ ಈ ಹೊಸ ಅಣುವಿದ್ಯುತ್ ಘಟಕಗಳು ಬೇಡ ಎಂದಿದ್ದಾರೆ.

See also  ವೃದ್ಧೆ ಹತ್ಯೆಗೈದು ಆಭರಣ ದೋಚಿದರು

ಕೈಗಾದಲ್ಲಿ ಈಗಾಗಲೇ ಸ್ಥಾಪಿಸಿರುವ ನಾಲ್ಕು ಅಣು ವಿದ್ಯತ್ ಘಟಕಗಳಿಂದ ಸಂಕಷ್ಟಗೊಳಗಾಗಿರುವ ಸ್ಥಳೀಯ ರೈತರು, ವನವಾಸಿಗಳು, ಮೀನುಗಾರರು ಇವರಾರಿಗೂ ಸೂಕ್ತವಾದ ಮತ್ತು ನ್ಯಾಯಯುತ ಪುನರ್ವಸತಿ ಆಗಿಲ್ಲ.ಕೈಗಾ ಅಣುವಿದ್ಯುತ್ ಸ್ಥಾವರ ಆಡಳಿತವು ಸ್ಥಳೀಯರಿಗೆ ಉದ್ಯೋಗದ ಭರವಸೆ ನೀಡುವುದಾದರೂ, ನಿಜಕ್ಕೂ ಅಷ್ಟು ಉದ್ಯೋಗಗಳೂ ಇಲ್ಲಿ ಲಭ್ಯವಿರುವುದಿಲ್ಲ. ಕೇವಲ ಕೆಲವು ಕೆಳಹಂತದ ದಿನಗೂಲಿ ಉದ್ಯೋಗ ಸಿಗಬಹುದಷ್ಟೆ ಎಂದಿದ್ದಾರೆ. ಅಣುವಿದ್ಯುತ್ ಆರ್ಥಿಕವಾಗಿ ಲಾಭದಾಯಕವಲ್ಲ ಎಂದು ಈಗಾಗಲೇ ವಿಜ್ಞಾನಿಗಳು ತೋರಿಸಿದ್ದಾರೆ. ಇದರಿಂದಾಗಿ ಈ ವಿನಾಶಕಾರಿ ಯೋಜನೆಯ ವಿಸ್ತರಣೆ ಬೇಡ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಅಣು ಸ್ಥಾವರದ ಬದಲು ಅಲ್ಪವೆಚ್ಚದ ಮತ್ತು ಪರಿಸರಕ್ಕೆ ಪೂರಕವಾದ ಸೌರವಿದ್ಯುತ್ತಿನಂಥ ಬದಲಿ ಇಂಧನ ಮೂಲಗಳಿವೆ. ಅವನ್ನು ಸರ್ಕಾರ ವ್ಯಾಪಕವಾಗಿ ಕೈಗೊಳ್ಳುವುದರ ಮೂಲಕ ನಮ್ಮ ಜಿಲ್ಲೆ, ರಾಜ್ಯ ಮತ್ತು ದೇಶದ ವಿದ್ಯುತ್ ಕೊರತೆ ನೀಗಿಸಲು ಸಾಧ್ಯವಿದೆ ಎಂದು ಪಧಾನಿಗೆ ಪತ್ರದಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು