News Kannada
Wednesday, December 07 2022

ಕರ್ನಾಟಕ

ಮಾಜಿ ಸೈನಿಕರನ್ನು ನಿರ್ಲಕ್ಷಿಸಿದರೆ ಕೊಡಗು ಬಂದ್: ಮಾಜಿ ಸೈನಿಕರ ಸಂಘ ಎಚ್ಚರಿಕೆ

Photo Credit :

ಮಾಜಿ ಸೈನಿಕರನ್ನು ನಿರ್ಲಕ್ಷಿಸಿದರೆ ಕೊಡಗು ಬಂದ್: ಮಾಜಿ ಸೈನಿಕರ ಸಂಘ ಎಚ್ಚರಿಕೆ

ಮಡಿಕೇರಿ: ಮಾಜಿ ಸೈನಿಕರಿಗೆ ಭೂ ಮಂಜೂರಾತಿ ಮಾಡುವ ಬದಲು ವಿವಿಧ ಕಾರಣಗಳನ್ನು ನೀಡಿ ಈಗಾಗಲೇ ಮಂಜೂರು ಮಾಡಿರುವ ಭೂಮಿಯನ್ನೂ ಕಸಿದುಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘ, ಮಾಜಿ ಸೈನಿಕರ ಸಮಸ್ಯೆಗಳಿಗೆ ಸ್ಪಂದಿಸದೆ ಕಿರುಕುಳ ನೀಡುವುದನ್ನು ಮುಂದುವರೆಸಿದರೆ ಕೊಡಗು ಬಂದ್ ಪ್ರತಿಭಟನೆಗೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ನಿವೃತ್ತ ಮೇಜರ್ ಜನರಲ್ ಬಿ.ಎ.ಕಾರ್ಯಪ್ಪ ಅವರು, ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರದ ಧೋರಣೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆಯಲ್ಲಿ ಸುಮಾರು 15 ಸಾವಿರ ಮಂದಿ ಮಾಜಿ ಸೈನಿಕರು, ವಿಧವೆಯರು, ಸೈನಿಕರ ಅವಲಂಬಿತರು ವಾಸವಾಗಿದ್ದಾರೆ. ಇವರಲ್ಲಿ ಬಹುತೇಕ ಮಾಜಿ ಸೈನಿಕರು ಕನಿಷ್ಟ 15-40 ವರ್ಷಗಳಷ್ಟು ಕಾಲ ಸೇವೆ ಸಲ್ಲಿಸಿ ಬಂದವರಾಗಿದ್ದಾರೆ. ಮಾಜಿ ಸೈನಿಕರ ಕುಂದುಕೊರತೆಗಳನ್ನು ನಿವಾರಿಸುವ ಸಮಿತಿಗೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿದ್ದರೂ, ಒಂದಿಬ್ಬರು ಜಿಲ್ಲಾಧಿಕಾರಿಗಳನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸಿಕೊಂಡು ಬಂದಿದ್ದಾರೆ ಎಂದು ಆರೋಪಿಸಿದರು.

ಜಾಗ ಮಂಜೂರಾತಿಗಾಗಿ ಮಾಜಿ ಸೈನಿಕರು 10 ವರ್ಷಗಳ ಹಿಂದೆ ಸಲ್ಲಿಸಿದ ಸುಮಾರು 300ಕ್ಕೂ ಅಧಿಕ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಕಳೆದ 10-15 ವರ್ಷಗಳಿಂದ ಸರಕಾರಿ ಜಾಗವನ್ನು ಅತಿಕ್ರಮಿಸಿಕೊಂಡು ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಮಾಜಿ ಸೈನಿಕರ ಜಾಗವನ್ನು ತೆರವು ಮಾಡುವಂತೆ ಕಂದಾಯ ಇಲಾಖೆ ನೋಟೀಸ್ ನೀಡುವುದರೊಂದಿಗೆ ಜಾಗ ತೆರವು ಕಾರ್ಯಾಚರಣೆಗೂ ಮುಂದಾಗಿದೆ. ಆದರೆ ಅದೇ ಜಿಲ್ಲಾಡಳಿತ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಕೊಡಗಿಗೆ ಆಗಮಿಸುವ ವಲಸಿಗರಿಗೆ ನೂರಾರು ಎಕರೆ ಸರಕಾರಿ ಜಾಗ ಅತಿಕ್ರಮಣ ಮಾಡಲು ಅವಕಾಶ ನೀಡುವುದರೊಂದಿಗೆ ಅದನ್ನು ಸಕ್ರಮಗೊಳಿಸುವಲ್ಲೂ ಮುತುವರ್ಜಿವಹಿಸುತ್ತಿದೆ ಎಂದು ಬಿ.ಎ.ಕಾರ್ಯಪ್ಪ ಟೀಕಿಸಿದರು.

ಮಾಜಿ ಸೈನಿಕರ ಜಮೀನನ್ನು ಕಿತ್ತುಕೊಳ್ಳಲು ಜಿಲ್ಲಾಡಳಿತ ಮುಂದಾದಲ್ಲಿ ಸಂಘದ ಪದಾಧಿಕಾರಿಗಳಿಗೆ ಮಾಹಿತಿ ನೀಡಿ ಪ್ರತಿಭಟಿಸುವಂತೆ ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ಜಾಗ ನೀಡುವುದಕ್ಕಾಗಿ ತಾಲೂಕು ತಹಶೀಲ್ದಾರರುಗಳು ಮಾಜಿ ಸೈನಿಕರಿಗೆ ನೀಡಿದ ಹಕ್ಕುಪತ್ರಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸುತ್ತಿರುವುದು ಸಂಘದ ಗಮನಕ್ಕೆ ಬಂದಿದ್ದು, ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ವಿಚಾರಣೆ ಮಾಡಬೇಕು ಎಂದು ಕಾರ್ಯಪ್ಪ ಒತ್ತಾಯಿಸಿದರು. ಹೊರ ರಾಜ್ಯಗಳಿಂದ ಬಂದು ಅಕ್ರಮವಾಗಿ ನದಿ ದಂಡೆಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಪ್ರತೀವರ್ಷ ಸರಕಾರದಿಂದ ಪರಿಹಾರ ಪಡೆಯುವುದರೊಂದಿಗೆ ಪ್ರಸಕ್ತ ಸಂತ್ರಸ್ತರ ಹೆಸರಿನಲ್ಲಿ ಜಾಗ ಪಡೆಯಲು ಮುಂದಾಗುವ ವ್ಯಕ್ತಿಗಳ ಬಗ್ಗೆ ಜಿಲ್ಲಾಡಳಿತ ಎಚ್ಚರವಹಿಸಬೇಕು ಎಂದೂ ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕರ್ನಲ್ ಚಿಣ್ಣಪ್ಪ, ಮಡಿಕೇರಿ ತಾಲೂಕು ಅಧ್ಯಕ್ಷ ಕೆ.ಎ.ಆನಂದ, ಚೇರಂಬಾಣೆ ಸಂಘದ ಅಧ್ಯಕ್ಷ ಸುಬೇದಾರ್ ಮಾದಪ್ಪ ಹಾಗೂ ನಾಪೋಕ್ಲು ಸಂಘದ ಶಂಭು ಉಪಸ್ಥಿತರಿದ್ದರು.

See also  ಪ್ರಚೋದನಕಾರಿ ಹೇಳಿಕೆ ನೀಡಿದ್ದ ಶಾಸಕ ರಾಜಾಸಿಂಗ್ ವಿರುದ್ಧ ಆಫ್ ಐಆರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು