News Kannada
Friday, December 09 2022

ಕರ್ನಾಟಕ

ಹರ್ಷ ಶುಗರ್ಸ್‍ಗೆ ಹಣಕಾಸು ನೆರವು ನೀಡಿಲ್ಲ: ಡಿಸಿಸಿ ಬ್ಯಾಂಕ್ ಸ್ಪಷ್ಟನೆ

Photo Credit :

ಹರ್ಷ ಶುಗರ್ಸ್‍ಗೆ ಹಣಕಾಸು ನೆರವು ನೀಡಿಲ್ಲ: ಡಿಸಿಸಿ ಬ್ಯಾಂಕ್ ಸ್ಪಷ್ಟನೆ

ಮಡಿಕೇರಿ: ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಂಬಂಧಿಗೆ ಸೇರಿದ ಹರ್ಷ ಶುಗರ್ಸ್‍ಗೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನಿಂದ ಯಾವುದೇ ಹಣಕಾಸು ನೆರವು ನೀಡಿಲ್ಲ. ಕೊಡಗಿನ ರೈತರ ಹಿತವನ್ನು ಬಲಿಕೊಡುವ ಕಾರ್ಯಕ್ಕೆ ಬ್ಯಾಂಕ್ ಆಡಳಿತ ಮಂಡಳಿ ಕೈಹಾಕಿಲ್ಲ ಎಂದು ಬ್ಯಾಂಕ್‍ನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಸ್ಪಷ್ಟ ಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನಿಂದ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಂಬಂಧಿಕರಿಗೆ ಸೇರಿದ ಹರ್ಷ ಶುಗರ್ಸ್‍ಗೆ ನಿಯಮ ಮೀರಿ ಕೋಟ್ಯಾಂತರ ರೂ. ಸಾಲ ನೀಡಲಾಗಿದೆ ಎನ್ನುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದರು.

ಹರ್ಷ ಶುಗರ್ಸ್‍ಗೆ ಸಾಲ ನೀಡುವಂತೆ 2014-15ನೇ ಸಾಲಿನಲ್ಲಿ ಮೌಖಿಕ ಬೇಡಿಕೆ ಬಂದಿತ್ತು. ಆದರೆ ಬ್ಯಾಂಕ್‍ನ ನಿಯಮ ಪ್ರಕಾರ ಹೊರ ಜಿಲ್ಲೆಗೆ ಸಾಲ ನೀಡಲು ಸಾಧ್ಯವಿಲ್ಲ ಎಂಬ ಕಾರಣದಿಂದ ಆ ಬೇಡಿಕೆಯನ್ನು ತಿರಸ್ಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಹಾಗೂ ಆ ಸಂಸ್ಥೆಯ ನಡುವೆ ಯಾವುದೇ ಪತ್ರವ್ಯವಹಾರ ಕೂಡ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಆ ನಂತರದ ದಿನಗಳಲ್ಲಿ ಸಹಕಾರ ಕಾಯ್ದೆಯ ನಿಯಮ 25ಸಿ ಅಡಿಯಲ್ಲಿ ಬ್ಯಾಂಕ್‍ನ ನಿಯಮಾವಳಿಗೆ ತಿದ್ದುಪಡಿ ತಂದು ಹೊರ ಜಿಲ್ಲೆಯ ಸಂಸ್ಥೆಗಳಿಗೆ ಸಾಲ ನೀಡುವ ಅವಕಾಶವನ್ನು ಮಾಡಿಕೊಳ್ಳಲಾಗಿದೆಯಾದರೂ, ಬ್ಯಾಂಕ್ ಸ್ವತಂತ್ರವಾಗಿ ಹೊರ ಜಿಲ್ಲೆಯ ಸಂಸ್ಥೆಗಳಿಗೆ ಸಾಲ ನೀಡಿಲ್ಲ. ಆದರೆ ಅಪೆಕ್ಸ್ ಬ್ಯಾಂಕ್‍ನ ನಾಯಕತ್ವದ ಸಮೂಹ ಬ್ಯಾಂಕ್ ಸಮಿತಿ ಶಿಫಾರಸ್ಸಿನ ಮೇರೆಗೆ ಬಾಗಲಕೋಟೆ ಜಿಲ್ಲೆಯ ಸವರಿನ್ ಇಂಡಸ್ಟ್ರೀಸ್‍ಗೆ 2015ರಲ್ಲಿ ಸುಮಾರು 8.68 ಕೋಟಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಣಚೂರು ಇಸ್ಲಾಮಿಕ್ ಎಜುಕೇಷನ್ ಟ್ರಸ್ಟ್ ಗೆ 9.85 ಕೋಟಿ ರೂ.ಗಳ ಸಾಲ ನೀಡಲಾಗಿದೆ. ಈ ಪೈಕಿ ಸವರಿನ್ ಇಂಡಸ್ಟ್ರೀಸ್ ಇದುವರೆಗೆ ಅಸಲಿನ ಜೊತೆಗೆ ಸುಮಾರು 1.56 ಕೋಟಿ ರೂ.ಗಳ ಬಡ್ಡಿಯನ್ನೂ ಕಟ್ಟದೆ ‘ಡಿಫಾಲ್ಟರ್’ ಆಗಿದ್ದು, ಈ ಮೊತ್ತವನ್ನು ವಸೂಲು ಮಾಡಲು ಕಾನೂನಿನ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಬಾಂಡ್ ಗಣಪತಿ ತಿಳಿಸಿದರು.

ಕಣಚೂರು ಎಜುಕೇಷನ್ ಟ್ರಸ್ಟ್ ಅಸಲು ಮತ್ತು ಬಡ್ಡಿಯನ್ನು ಸಕಾಲದಲ್ಲಿ ಮರುಪಾವತಿ ಮಾಡುತ್ತಾ ಬರುತ್ತಿದ್ದು, ಹೊರ ಜಿಲ್ಲೆಗಳಿಗೆ ನೀಡಿದ ಸಾಲದ ವಸೂಲಾತಿಯ ಹೊಣೆ ಅಪೆಕ್ಸ್ ಬ್ಯಾಂಕ್ ಹಾಗೂ ಆಯಾ ಜಿಲ್ಲೆಗಳ ಸಹಕಾರ ಕೇಂದ್ರ ಬ್ಯಾಂಕ್‍ಗಳದ್ದಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಇದೀಗ ಬ್ಯಾಂಕ್‍ನ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಯ ಹಿನ್ನೆಲೆಯಲ್ಲಿ ಕೊಡಗಿನ ರೈತರು ಹಾಗೂ ಗ್ರಾಹಕರಲ್ಲಿ ಬ್ಯಾಂಕ್‍ನ ಬಗ್ಗೆ ಗೊಂದಲಗಳು ಸೃಷ್ಟಿಯಾಗಿದೆ. ಇದನ್ನು ಪರಿಹರಿಸುವುದು ಬ್ಯಾಂಕ್‍ನ ಆಡಳಿತ ಮಂಡಳಿಯ ಕರ್ತವ್ಯವಾಗಿದ್ದು, ಅದರಂತೆ ಪತ್ರಿಕಾಗೋಷ್ಠಿ ಮೂಲಕ ಸ್ಪಷ್ಟನೆ ನೀಡಲಾಗುತ್ತಿದೆ ಎಂದ ಬಾಂಡ್ ಗಣಪತಿ ಅವರು, ಡಿಸಿಸಿ ಬ್ಯಾಂಕ್‍ನ ಬೈಲಾ ತಿದ್ದುಪಡಿಯ ಬಳಿಕ 2014ರಲ್ಲಿ ಪ್ರಥಮ ಬಾರಿಗೆ ಹೊರ ಜಿಲ್ಲೆಗಳಿಗೆ ಸಾಲ ನೀಡಲಾಗಿದೆಯಾದರೂ, ಆನಂತರದ ದಿನಗಳಲ್ಲಿ ಯಾವುದೇ ಸಾಲ ನೀಡಿಲ್ಲ. ಅಲ್ಲದೆ ಪ್ರಸಕ್ತ ಸಾಲಿನಲ್ಲಿ ನಡೆದ ಮಹಾಸಭೆಯಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯನ್ನು ಮೀರಿ ಹೊರ ಜಿಲ್ಲೆಗಳಿಗೆ ಸಾಲ ನೀಡದಿರಲು ತೀರ್ಮಾನ ಕೈಗೊಳ್ಳಲಾಗಿದೆ ಎಂದೂ ಅವರು ಹೇಳಿದರು.

See also  ಆಮೆ ಗತಿಯಲ್ಲಿ ಕಾಸರಗೋಡು ಮೆಡಿಕಲ್ ಕಾಲೇಜು ಕಟ್ಟಡ  ಕಾಮಗಾರಿ: ಪ್ರತಿಭಟನೆ

ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‍ನ ನಿರ್ದೇಶಕ ಕನ್ನಂಡ ಸಂಪತ್, ಪ್ರಧಾನ ವ್ಯವಸ್ಥಾಪಕ ಎಂ.ಕೆ.ಮೋಹನ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಗಿರೀಶ್‍ಕುಮಾರ್ ಹಾಗೂ ಗಣಪತಿ ಅವರುಗಳು ಉಪಸ್ಥಿತರಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು