ಮದ್ದೂರು: ಕೇಂದ್ರ ಸರ್ಕಾರ ವಿದೇಶಗಳಿಂದ ಹಾಲು ಆಮದು ಮಾಡಿಕೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ತಾಲೂಕಿನ ಕೊಪ್ಪದಲ್ಲಿ ರೈತರು ಪ್ರತಿಭಟನೆ ಮಾಡಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘದ ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ದೇಶದಲ್ಲಿ ಹೈನೋದ್ಯಮ ನಂಬಿಕೊಂಡು ಲಕ್ಷಾಂತರ ಕುಟುಂಬಗಳು ಜೀವನ ನಡೆಸುತ್ತಿದೆ. ಕೇಂದ್ರ ಸರ್ಕಾರ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಯಾವುದೇ ಷರತ್ತುಗಳಿಲ್ಲದೆ ಭಾರತಕ್ಕೆ ಆಮದು ಮಾಡಿಕೊಂಡು ಮುಕ್ತ ಮಾರುಕಟ್ಟೆ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಒಪ್ಪಂದದಿಂದ ರೈತರ ಉಪ ಕಸುಬುಗಳಿಗೆ ಕೊಡಲಿ ಪೆಟ್ಟು ಬೀಳಲಿದೆ. ವಿದೇಶದಿಂದ ಭಾರತಕ್ಕೆ ಹಾಲು ಆಮದು ಮಾಡಿಕೊಂಡರೆ ಲೀಟರ್ ಹಾಲು 12 ರೂ.ಗೆ ದೊರೆಯಲಿದೆ. ಪ್ರಸ್ತುತ ಇಲ್ಲಿಯ ರೈತರಿಗೆ ಲೀಟರ್ಗೆ 26 ರೂ. ಸಿಗುತ್ತಿದೆ. ಈ ಒಪ್ಪಂದ ಮಾಡಿಕೊಂಡರೆ ಇಲ್ಲಿಯಾ ರೈತರಿಗೆ ಒಂದು ಲೀಟರ್ ಹಾಲಿಗೆ 6 ರಿಂದ 7 ರೂ ಇಳಿಯಲಿದೆ. ಜತೆಗೆ, ಜಾನುವಾರುಗಳ ಬೆಲೆಗಳು ಕುಸಿಯಲಿವೆ. ಪಶು ಆಹಾರಗಳು ಬೆಳೆಗಳು ಹೆಚ್ಚಾಗಿರುವುದರಿಂದ ದೇಶದ ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿ ರೈತರು ಆತ್ಮಹತ್ಯೆ ಹಾದಿ ಹಿಡಿಯ ಬೇಕಾಗುತ್ತದೆ ಬೇಸರ ವ್ಯಕ್ತಪಡಿಸಿದರು.
ಈಗಾಗಲೇ ಹಲವಾರು ಒಪ್ಪಂದಗಳ ಮೂಲಕ ಮುಕ್ತ ಮಾರಾಟಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿ ರೈತ ಸಂಕುಲಕ್ಕೆ ತೀವ್ರ ತರಹವಾದ ತೊಂದರೆ ನೀಡಿದ್ದಾರೆ. ಇನ್ನಾದರೂ ದೇಶದ ರೈತರ ಪಾಲಿಗೆ ಮಾರಕವಾಗುವಂತೆ ಒಪ್ಪಂದಗಳಿಗೆ ಕೇಂದ್ರ ಸರ್ಕಾರ ಸಹಿ ಹಾಕಬಾರದು ಎಂದು ತಿಳಿಸಿದರು.
ರಾಜ್ಯದ ಬಿಜೆಪಿ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹಾಕಿ ವಿದೇಶದಿಂದ ಹಾಲನ್ನು ಆಮದು ಮಾಡಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕದಂತೆ ಒತ್ತಡ ಹೇರಬೇಕು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಹುರಗಲವಾಡಿ ಉಮೇಶ್, ಚಿಕ್ಕದೊಡ್ಡಿ ಶಿವಕುಮಾರ್, ಆಬಲವಾಡಿ ಪಟ್ಟುಸ್ವಾಮಿ, ಮೂಡ್ಯ ಚಂದ್ರು, ಅರಗಿನಮೇಳೆ ರಾಮಣ್ಣ, ಭಾರತಿ, ಅನಿತಾ, ಕೂಲಿಕಾರರ ಸಂಘದ ಅಧ್ಯಕ್ಷ ಕೊಡಗಳ್ಳಿ ಮಹದೇವ, ತಾಲೂಕು ಕಾರ್ಯದರ್ಶಿ ನಾಗರಾಜು¸ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.