ಮಡಿಕೇರಿ: ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡುವುದರೊಂದಿಗೆ ಸುಮಾರು 22 ವರ್ಷಗಳ ಕಾಲ ಜೈಲುವಾಸ ಮತ್ತು ಚಿತ್ರಹಿಂಸೆ ಅನುಭವಿಸಿದ ವೀರ ಸಾವರ್ಕರ್ ಅವರ ಬಗ್ಗೆ ಅತ್ಯಂತ ಕೀಳಾಗಿ ಮಾತನಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾತಂತ್ರ್ಯ ಹೋರಾಟಗಾರರ ಸಮೂಹಕ್ಕೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಎ.ಕೆ.ಮನುಮುತ್ತಪ್ಪ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭಿಕರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವುದಕ್ಕಾಗಿ ತಮ್ಮ ನಾಲಗೆಯನ್ನು ಹೇಗೆಂದರೆ ಹಾಗೆ ಹರಿಯಬಿಡುವ ಸಿದ್ದರಾಮಯ್ಯ ಅವರು ತಾನು ಏನು ಮಾತನಾಡುತ್ತಿದ್ದೇನೆ ಎಂಬುದನ್ನೇ ಮರೆತಿರುತ್ತಾರೆ. ದೇಶದ ಇತಿಹಾಸವನ್ನೇ ಅರಿಯದ ಅವರು ಒಬ್ಬ ವಕೀಲ ಎಂದು ಹೇಳಿಕೊಳ್ಳುವುದಕ್ಕೂ ಅರ್ಹರಲ್ಲ ಎಂದು ವಾಗ್ದಾಳಿ ನಡೆಸಿದರು.
ಈ ರಾಜ್ಯಕ್ಕೆ ಸಿದ್ದರಾಮಯ್ಯ ಅವರ ಕೊಡುಗೆ ಏನು? ಎಂದು ಪ್ರಶ್ನಿಸಿದ ಮನುಮುತ್ತಪ್ಪ, ತಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಟಿಪ್ಪುವಿನಂತಹ ಓರ್ವ ದರೋಡೆಕೋರನನ್ನು ಸ್ವಾತಂತ್ರ್ಯ ಹೋರಾಟಗಾರನೆಂದು ವೈಭವೀಕರಿಸಿ ಹಲವು ಮಂದಿ ದೇಶಭಕ್ತರ ಸಾವಿಗೆ ಪ್ರಚೋದನೆ ನೀಡಿದ್ದಲ್ಲದೆ, ಜಾತಿ-ಜಾತಿಗಳ ನಡುವೆ, ಸಮಾಜ-ಸಮಾಜಗಳ ನಡುವೆ ಕಂದಕವನ್ನು ಸೃಷ್ಟಿಸಿದ್ದು, ಲಿಂಗಾಯಿತ ಸಮುದಾಯವನ್ನು ಒಡೆಯುವ ಪ್ರಯತ್ನ ಮಾಡಿರುವುದೇ ಅವರ ಸಾಧನೆಯಾಗಿದೆ ಎಂದು ಮನುಮುತ್ತಪ್ಪ ಟೀಕಿಸಿದರು.
ಕಾಂಗ್ರೆಸ್ ವೇದಿಕೆಗಳಲ್ಲಿ ಕಾಂಗ್ರೆಸ್ನ್ನೇ ನಾಶ ಮಾಡಬೇಕೆಂದು ಮಾತನಾಡುವ ಸಿದ್ದರಾಮಯ್ಯ ಓರ್ವ ಸಮಯಸಾಧಕ ರಾಜಕಾರಣಿ ಎಂದು ಮೂದಲಿಸಿದ ಅವರು, ವೀರ ಸಾವರ್ಕರ್ ಬಗ್ಗೆ ಸಿದ್ದರಾಮಯ್ಯ ಅವರಿಗೆ ಮಾಹಿತಿ ಇಲ್ಲದಿದ್ದಲ್ಲಿ ಅವರೊಮ್ಮೆ ಅಂಡಮಾನ್ಗೆ ಭೇಟಿ ನೀಡಿ ಅಲ್ಲಿನ ಸೆಲ್ಯುಲರ್ ಜೈಲನ್ನು ಸಂದರ್ಶಿಸಿ ಬರಲಿ. ಅಲ್ಲಿ ಸಾವರ್ಕರ್ ಅವರ ಜೈಲುವಾಸದ ಎಲ್ಲಾ ಘಟನಾವಳಿಗಳನ್ನು ಅಧ್ಯಯನ ಮಾಡಬಹುದಾಗಿದೆ ಎಂದು ಹೇಳಿದರು.
ಓರ್ವ ನೈಜ ಸ್ವಾತಂತ್ರ್ಯ ಹೋರಾಟಗಾರನಿಗೆ ಭಾರತರತ್ನ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸುವ ಕಾಂಗ್ರೆಸ್ಸಿಗರ ಮನಸ್ಥಿತಿಯ ಬಗ್ಗೆ ಮರುಕ ವ್ಯಕ್ತಪಡಿಸಿದ ಮನು ಮುತ್ತಪ್ಪ ಅವರು, ಯಾರದೇ ಶಿಫಾರಸ್ಸು ಇಲ್ಲದಿದ್ದರೂ ಜವಾಹರಲಾಲ್ ನೆಹರೂ ಅವರು ತಮಗೆ ತಾವೇ ಭಾರತರತ್ನ ಘೋಷಿಸಿಕೊಂಡಿದ್ದಾರೆ. ಅಲ್ಲದೆ ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರುಗಳಿಗೆ ಭಾರತರತ್ನ ನೀಡುವ ಮೂಲಕ ಒಂದೇ ಕುಟುಂಬಕ್ಕೆ ಮೂರು ಭಾರತರತ್ನಗಳನ್ನು ನೀಡಿದ ಕೀರ್ತಿ ಕಾಂಗ್ರೆಸ್ಗೆ ಸಲ್ಲುತ್ತದೆ. ಆದರೆ ಭಾರತರತ್ನ ನೀಡುವ ವಿಚಾರದಲ್ಲಿ ಬಿಜೆಪಿ ಎಂದೂ ರಾಜಕೀಯ ಮಾಡಿಲ್ಲ. ದೇಶಕ್ಕಾಗಿ ತ್ಯಾಗ ಮಾಡದ ವ್ಯಕ್ತಿಗಳಿಗೆ ಭಾರತರತ್ನ ನೀಡುವಂತೆ ಶಿಫಾರಸ್ಸನ್ನೂ ಮಾಡುವುದಿಲ್ಲ ಎಂದು ನುಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಸುಮಾರು ಎರಡು ದಶಕಗಳಿಗೂ ಅಧಿಕ ಕಾಲ ಜೈಲುವಾಸ, ಕರಿನೀರಿನ ಶಿಕ್ಷೆ ಸೇರಿದಂತೆ ಬ್ರಿಟೀಷರಿಂದ ಚಿತ್ರಹಿಂಸೆ ಅನುಭವಿಸಿದ ವೀರ ಸಾವರ್ಕರ್ ಅವರಿಗೆ ಭಾರತರತ್ನ ನೀಡುವುದು ಅತ್ಯಂತ ಸೂಕ್ತವಾಗಿದ್ದು, ಆ ನಿಟ್ಟಿನಲ್ಲಿ ಕೇಂದ್ರ ಸರಕಾರ ಮುಂದಡಿ ಇಡಬೇಕೆಂದು ರಾಜ್ಯ ಬಿಜೆಪಿ ಒತ್ತಾಯಿಸಲಿರುವುದಾಗಿ ಮನುಮುತ್ತಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಎನ್.ಎ.ರವಿಬಸಪ್ಪ, ಮಡಿಕೇರಿ ತಾಲೂಕು ಕಾರ್ಯದರ್ಶಿ ಕೋಡಿರ ಪ್ರಸನ್ನ, ವೀರಾಜಪೇಟೆ ತಾಲೂಕು ಉಪಾಧ್ಯಕ್ಷ ಮನು ರಾಮಚಂದ್ರ, ಮಡಿಕೇರಿ ತಾ.ಪಂ. ಸದಸ್ಯ ಕೊಡಪಾಲು ಗಣಪತಿ ಉಪಸ್ಥಿತರಿದ್ದರು.