ನಾಗಮಂಗಲ: ಸುರಿದ ಭಾರೀ ಮಳೆಗೆ ಸೇತುವೆ ಕೊಚ್ಚಿ ಹೋಗಿ ರಸ್ತೆ ಸಂಪರ್ಕ ಕಡಿತಗೊಂಡಿರುವ ಘಟನೆ ತಾಲೂಕು ಬೋಗಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿ ಗ್ರಾಮವಾದ ಗಿಡುವಿನಹೊಸಹಳ್ಳಿಯಲ್ಲಿ ನಡೆದಿದೆ.
ಕೆ.ಆರ್ ಪೇಟೆ ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಗೆ ಹೊಂದಿಕೊಂಡಂತೆ ಇರುವ ಮುಖ್ಯರಸ್ತೆಯಲ್ಲಿದ್ದ ಸೇತುವೆ ಕೊಚ್ಚಿ ಹೋಗಿದ್ದು, ಇದರಿಂದ ತಾಲೂಕಿನ ಗಡಿಭಾಗದ ಕೆಸವಿನಕಟ್ಟೆ ಗಿಡುವಿನ ಹೊಸಹಳ್ಳಿ ಸಣ್ಣೆನಹಳ್ಳಿ ಮತ್ತು 15ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕಡಿತಗೊಂಡಿದೆ.
ಈ ಭಾಗದ ರೈತರು, ವ್ಯಾಪಾರಸ್ಥರು, ಶಾಲಾ ಮಕ್ಕಳು ದಿನನಿತ್ಯದ ಕೆಲಸಗಳಿಗೆ ಸಂತೆಬಾಚಳ್ಳಿಯನ್ನು ಆಶ್ರಯಿಸಿದ್ದರು. ಆದರೆ ಈ ಸೇತುವೆ ಕೊಚ್ಚಿ ಹೋಗಿರುವುದರಿಂದ 20 ಕಿಲೋ ಮೀಟರ್ ಸುತ್ತಿ ಹೋಗಬೇಕಾದ ಪರಿಸ್ಥಿತಿ ಒದಗಿ ಬಂದಿದೆ. ಹೀಗಾಗಿ ಕೂಡಲೇ ನೂತನ ಸೇತುವೆಯನ್ನು ನಿರ್ಮಾಣ ಮಾಡಿಕೊಡಬೇಕೆಂದು ಸುತ್ತಮುತ್ತಲ ಗ್ರಾಮಸ್ಥರು ಆಗ್ರಹಿಸಿದ್ದು, ತಾಲೂಕು ಆಡಳಿತ ಮತ್ತು ನಾಗಮಂಗಲ ಶಾಸಕರಾದ ಸುರೇಶ್ ಗೌಡ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.