ಕಾರವಾರ: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ರಾಜ್ಯದ ಕರಾವಳಿ ಭಾಗದಲ್ಲಿ ಹವಾಮಾನ ವೈಪರೀತ್ಯದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ತಹಸೀಲ್ದಾರರಿಗೆ ಮುಂಜಾಗೃತ ಕ್ರಮವಾಗಿ ಕೇಂದ್ರ ಸ್ಥಾನದಲ್ಲೇ ಉಳಿಯಲು ಅಪರ ಜಿಲ್ಲಾಧಿಕಾರಿ ನಾಗರಾಜ್ ಸಿಂಗ್ರೇರ್ ಆದೇಶಿಸಿದ್ದಾರೆ.
ಅಕ್ಟೋಬರ್ 25 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೈಅಲರ್ಟ್ ಘೋಷಿಸಿದೆ. ಕರಾವಳಿಯಲ್ಲೇ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಜನರ ರಕ್ಷಣೆಗಾಗಿ ಕ್ರಮಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಜಿಲ್ಲೆಯ ಎಲ್ಲ ಕಂಟ್ರೋಲ್ ರೂಂಗಳನ್ನು 24 ತಾಸು ತೆರೆದಿಡುವಂತೆ ಸೂಚಿಸಲಾಗಿದೆ. ಭಾರೀ ಮಳೆಯಾದರೆ ಯಾವುದೇ ಅವಘಡವನ್ನು ಸಂಭವಿಸುವ ಸಾಧ್ಯತೆಗಳಿರುವುದರಿಂದ ಕ್ರಮದ ಭಾಗವಾಗಿ ತಹಸೀಲ್ದಾರರು ಕೇಂದ್ರ ಸ್ಥಾನದಲ್ಲೇ ಇದ್ದು ಸೂಕ್ತ ಮಾಹಿತಿಗಳನ್ನು ಸಾರ್ವಜನಿಕರಿಗೆ ನೀಡಬೇಕು ಎಂದು ತಿಳಿಸಲಾಗಿದೆ.
ಜಿಲ್ಲೆಯ ಕರಾವಳಿಯಲ್ಲಿ ಭಾರೀ ಮಳೆಯಾಗಿದ್ದು ಕಾರವಾರ, ಅಂಕೋಲಾ, ಭಟ್ಕಳದ ಅನೇಕ ಪ್ರದೇಶಗಳು ಜಲಾವೃತಗೊಂಡಿದ್ದು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ ನೆರೆ ಹಾವಳಿ ಭೀತಿ ಮರೆಯಾಗುವ ಪೂರ್ವದಲ್ಲೇ ಮತ್ತೇ ಭಾರೀ ಮಳೆಯ ಮುನ್ಸೂಚನೆ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ.
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 293.8ಮಿಮೀ ಮಳೆಯಾಗಿದ್ದು ಸರಾಸರಿ 26.7 ಮಿಮೀ ಮಳೆ ದಾಖಲಾಗಿದೆ. ಅಕ್ಟೋಬರ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 152 ಮಿಮೀ ಇದ್ದು, ಇದುವರೆಗೆ ಸರಾಸರಿ ಪ್ರಮಣ 263.2 ಮಿಮೀ ಮಳೆ ದಾಖಲಾಗಿದೆ.
ಈ ಅವಧಿಯಲ್ಲಿ ಅಂಕೋಲಾದಲ್ಲಿ 64 ಮಿಮೀ, ಭಟ್ಕಳ 67.6 ಮಿಮೀ, ಹಳಿಯಾಳ 19.8 ಹೊನ್ನಾವರ 3.0 ಮಿಮೀ, ಕಾರವಾರ 32.4 ಮಿಮೀ, ಕುಮಟಾ 7.7 ಮಿಮೀ, ಮುಂಡಗೋಡ 48.4 ಮಿಮೀ, ಸಿದ್ದಾಪುರ 47.6 ಮಿಮೀ, ಶಿರಸಿ 0.5 ಮಿಮೀ, ಜೊಯ್ಡಾ 2.8 ಮಿಮೀ ಮಳೆ ದಾಖಲಾಗಿದೆ.