ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಡಲ ತೀರದಲ್ಲಿ ಕೋಸ್ಟ್ಗಾರ್ಡ್ನ ಹೋವರ್ ಕ್ರಾಫ್ಟ್ ನಿಲ್ದಾಣಕ್ಕೆ ಅವಶ್ಯತೆ ಇದೆ ಎನ್ನುವ ಬೇಡಿಕೆ ವ್ಯಕ್ತವಾಗಿದ್ದು ಈ ಬಗ್ಗೆ ಈ ಯೋಜನೆ ರೂಪಿಸಲಾಗಿದ್ದು ಶೀಘ್ರವೇ ಈ ಬಗ್ಗೆ ಕ್ರಮಕೈಗೊಳ್ಳಲು ಕೋಸ್ಟ್ ಗಾರ್ಡ್ ಹಾಗೂ ಜಿಲ್ಲಾಡಳಿತ ಮುಂದಾಗಿದೆ.
ಕಳೆದ 2017ರಲ್ಲಿ ಕಾರವಾರದ ಕಡಲ ತೀರದಲ್ಲಿ ಹೋವರ್ ಕ್ರಾಫ್ಟ್ ನಿಲ್ದಾಣ ಸೇರಿದಂತೆ ಕೋಸ್ಟ್ಗಾರ್ಡ್ ಕಚೇರಿ ಸ್ಥಾಪನೆಯ ಬಗ್ಗೆ ಯೋಜಿಸಲಾಗಿತ್ತು. ಅನೇಕ ಬಾರಿ ಜಿಲ್ಲಾಡಳಿತ ಯೋಜನೆ ಸಿದ್ಧಪಡಿಸಿದ್ದರೂ ಸ್ಥಳೀಯರ ವಿರೋಧದಿಂದಾಗಿ ಚರ್ಚೆ ಹಂತದಲ್ಲೇ ಯೋಜನೆ ನಿಂತಿತ್ತು. ಈಗ ನಿಲ್ದಾಣ ನಿರ್ಮಾಣವಾದಲ್ಲಿ ಹೋವರ್ ಕ್ರಾಫ್ಟ್ವೊಂದನ್ನು ಇಲ್ಲಿಯೇ ಶಾಶ್ವತವಾಗಿ ಒದಗಿಸಲು ಕೋಸ್ಟ್ಗಾರ್ಡ್ ತೀರ್ಮಾನಿಸಿದೆ.
ಸ್ವದೇಶಿ ನಿರ್ಮಿತ ಹೋವರ್ ಕ್ರಾಫ್ಟ್ ಇಲ್ಲಿಗೆ ಒದಗಿಸಲು ತೀರ್ಮಾನಿಸಲಾಗಿದ್ದು ಅದನ್ನು ಕಾರವಾರ ನೀಡಲು ಯೋಚಿಸಲಾಗಿದೆ. ಇದಕ್ಕಾಗಿ ಅಗತ್ಯ ವಿದ್ಯುತ್ ಪೂರೈಕೆ, ಇಂಧನ ಪೂರೈಕೆ ಕೇಂದ್ರ, ಆಡಳಿತ ಕಚೇರಿಗಳನ್ನು ಸ್ಥಾಪಿಸಲು ಕಡಲತೀರದಲ್ಲಿ ಸ್ಥಳ ಒದಗಿಸಲು ಕೋಸ್ಟ್ ಗಾರ್ಡ್ ಅಧಿಕಾರಿಗಳು ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ್ ಅವರೊಂದಿಗೆ ಮತ್ತೆ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಯೂ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ.
ದೇಶದ ಕರಾವಳಿಯ ಭದ್ರತೆಯ ದೃಷ್ಟಿಯಿಂದ ಹಾಗೂ ಸ್ಥಳೀಯರ, ಮೀನುಗಾರರ ಜೀವ ರಕ್ಷಣೆಯ ಸಲುವಾಗಿ ಶೀಘ್ರ ಸಮುದ್ರ ಕಾರ್ಯಾಚರಣೆಗಾಗಿ ಹೋವರ್ ಕ್ರಾಫ್ಟ್ ಇಲ್ಲಿಗೆ ಅಗತ್ಯವಿದೆ. ಕೋಸ್ಟ್ಗಾರ್ಡ್ ನಿಲ್ದಾಣ ಇಲ್ಲಿ ಸ್ಥಾಪನೆಯಾಗುವುದರಿಂದ ಸ್ಥಳೀಯರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಕಡಲತೀರದಲ್ಲಿ ಪ್ರವಾಸಿಗರಿಗೆ ಅಥವಾ ಮೀನುಗಾರರ ಮೀನುಗಾರಿಕಾ ಚಟುವಟಿಕೆಗೆ ಇದರಿಂದ ಯಾವುದೇ ಅಡ್ಡಿಯಾಗುವುದಿಲ್ಲ ಎನ್ನುತ್ತಾರೆ ಜಿಲ್ಲಾಧಿಕಾರಿ ಹರೀಶ್ಕುಮಾರ್.
ರಾಜ್ಯದ ದಕ್ಷಿಣ ಕನ್ನಡದ ಪಣಂಬೂರು ಕಡಲತೀರದಲ್ಲಿ ಈಗಾಗಲೇ ಕೋಸ್ಟ್ ಗಾರ್ಡ್ ರಾಜ್ಯ ಕೇಂದ್ರ ಕಚೇರಿ ಹಾಗೂ ನಿಲ್ದಾಣವಿದೆ. ಆದರೆ, ಇನ್ನಷ್ಟು ನೌಕೆಗಳನ್ನು, ಶಸ್ತ್ರಾಸ್ತ್ರಗಳನ್ನು ಇಡಲು ಸ್ಥಳಾವಕಾಶದ ಸಮಸ್ಯೆಯಿದೆ.
ಈ ಹಿನ್ನಲೆಯಲ್ಲಿ ನಗರದಲ್ಲಿ ಕೋಸ್ಟ್ ಗಾರ್ಡ್ ಉಪಕೇಂದ್ರವನ್ನು ಸ್ಥಾಪಿಸಲು ಅಗತ್ಯ ಭೂಮಿಯನ್ನು ಒದಗಿಸುವಂತೆ ಐದು ವರ್ಷಗಳ ಹಿಂದೆ ಕೋಸ್ಟ್ ಗಾರ್ಡ್ ನಿಂದ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಇಲ್ಲಿ ಹೋವರ್ ಕ್ರಾಫ್ಟ್ ಇದ್ದರೇ ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಅಲ್ಲದೆ ಸಮುದ್ರದಲ್ಲಿ ಮೀನುಗಾರರು ತೊಂದರೆಗೆ ಸಲುಕಿದಾಗ ರಕ್ಷಣಾ ಕಾರ್ಯಕ್ಕೆ ಬಳಕೆಯಾಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.