ಮಡಿಕೇರಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ದುರಾಡಳಿತದಿಂದ ದೇಶದ ಆರ್ಥಿಕ ಕ್ಷೇತ್ರ ಕುಂಟಿತಗೊಳ್ಳುತ್ತಿದ್ದು, ಜನರ ನೆಮ್ಮದಿ ಭಂಗವಾಗಿದೆ ಎಂದು ಆರೋಪಿಸಿರುವ ಮಡಿಕೇರಿ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ವೀಕ್ಷಕ ವೆಂಕಪ್ಪಗೌಡ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವಿನೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ಬಾಲಭಾವನದಲ್ಲಿ ನಡೆದ ಮುಖಂಡರ ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದ ಜನರಿಗೆ ಮರು ಸ್ವಾತಂತ್ರ್ಯ ಪಡೆಯುವ ಅನಿವಾರ್ಯತೆ ಎದುರಾಗಿದ್ದು, ಕೇಂದ್ರ ಸರ್ಕಾರದÀ ಅರ್ಥವಿಲ್ಲದ ಆರ್ಥಿಕ ನೀತಿಯಿಂದ ಆತಂಕ ಸೃಷ್ಟಿಯಾಗಿದೆ ಎಂದು ಆರೋಪಿಸಿದರು.
ದೇಶ ವಿದೇಶಗಳಿಗೆ ಪ್ರಯಾಣ ಬೆಳೆಸುವ ಪ್ರಧಾನಿ ನರೇಂದ್ರಮೋದಿ ಅವರು ಕರ್ನಾಟಕದ ಸಮಸ್ಯೆಗಳನ್ನು ಕಡೆಗಣಿಸುತ್ತಿದ್ದಾರೆ. ಈ ನಡುವೆ ಪ್ರಾಕೃತಿ ವಿಕೋಪದಿಂದ ಕಾಫಿ, ಕಾಳು ಮೆಣಸು ಸೇರಿದಂತೆ ಇನ್ನಿತರ ಬೆಳೆಗಳು ನಾಶವಾಗಿರುವ ಸಂದರ್ಭವೇ ಆರ್‍ಸಿಇಪಿ ಮುಕ್ತ ವ್ಯಾಪರ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿರುವುದು ಖಂಡನೀಯವೆಂದು ವೆಂಕಪ್ಪಗೌಡ ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಉದ್ದೇಶದಿಂದ ಬ್ಲಾಕ್ ಕಾಂಗ್ರೆಸ್ ಸಮಿತಿಗಳಿಗೆ ನೂತನ ಪದಾಧಿಕಾರಿಗಳ ಆಯ್ಕೆಗೆ ಕೆಪಿಸಿಸಿ ಸೂಚನೆ ನೀಡಿದೆ. ಇದರಿಂದ ಯಾವ ಕಾರ್ಯಕರ್ತರಿಗೂ ಅನ್ಯಾಯವಾಗುವುದಿಲ್ಲ, ಬದಲಿಗೆ ಪಕ್ಷ ಬಲಿಷ್ಠವಾಗಿ ಪ್ರತಿಯೊಬ್ಬರು ಅಧಿಕಾರವನ್ನು ಅನುಭವಿಸಬಹುದು ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ, ಬಿಜೆಪಿ ನೇತೃತ್ವದ ಸರ್ಕಾರದ ಜನವಿರೋಧಿ ನೀತಿಯಿಂದ ದೇಶದ ಜನ ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು. ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಸರಕಾರಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದು, ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಲ್ಲಿ ಮಾತ್ರ ನೆಮ್ಮದಿ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಪ್ರು ರವೀಂದ್ರ ತಾವು ಪಕ್ಷದ ಬೆಳವಣಿಗೆಗಾಗಿ ಶ್ರಮಿಸಿದ ಬಗ್ಗೆ ವಿವರಿಸಿದರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವೀಕ್ಷಕ ಶಾಹೀದ್, ಕೆಪಿಸಿಸಿ ಹಿರಿಯ ಸದಸ್ಯ ಟಿ.ಪಿ.ರಮೇಶ್, ಕೆ.ಎಂ.ಲೋಕೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫ್ ಸಂಪಾಜೆ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹ್ಯಾರಿಸ್, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್, ಮಹಿಳಾ ಘಟಕದ ಅಧ್ಯಕ್ಷೆ ಸುರಯ್ಯ ಅಬ್ರಾರ್, ಜಿ.ಪಂ. ಸದಸ್ಯರಾದ ಕುಮುದಾ ಧರ್ಮಪ್ಪ ಮತ್ತಿತರರು ಹಾಜರಿದ್ದರು.