News Kannada
Tuesday, October 04 2022

ಕರ್ನಾಟಕ

ಗುಮಟಾಪುರದಲ್ಲಿ ಸಗಣಿಯಲ್ಲಿ ಬಡಿದಾಡಿಕೊಳ್ಳುವ ಹಬ್ಬ - 1 min read

Photo Credit :

ಗುಮಟಾಪುರದಲ್ಲಿ ಸಗಣಿಯಲ್ಲಿ ಬಡಿದಾಡಿಕೊಳ್ಳುವ ಹಬ್ಬ

ಚಾಮರಾಜನಗರ ಗಡಿಭಾಗದ ತಮಿಳುನಾಡಿನ ತಾಳವಾಡಿ ಫಿರ್ಕಾ ವ್ಯಾಪ್ತಿಯ ಗುಮಟಾಪುರ ಗ್ರಾಮದಲ್ಲಿ ನಡೆಯುವ ವಿಭಿನ್ನ ಮತ್ತು ವಿಶಿಷ್ಟವಾದ ಹಬ್ಬವನ್ನು  ‘ಗೊರೆ ಹಬ್ಬ’ ಎಂದು ಕರೆಯಲಾಗುತ್ತದೆ.

ಇಲ್ಲಿ ಸಗಣಿಯಲ್ಲಿ ಬಡಿದಾಡುವುದೇ ಹಬ್ಬದ ಮುಖ್ಯ ಆಚರಣೆಯಾಗಿದೆ.

ಮೇಲ್ಮೋಟಕ್ಕೆ ಇದು ವಿಚಿತ್ರವಾಗಿ ಕಂಡು ಬಂದರೂ ಇದರ ಹಿಂದೆ ಸಂಪ್ರದಾಯ ಮಿಳಿತಗೊಂಡಿರುವುದು ಎದ್ದು ಕಾಣುತ್ತದೆ.

ಪ್ರತಿ ವರ್ಷ ದೀಪಾವಳಿ (ಬಲಿಪಾಡ್ಯಮಿ) ಹಬ್ಬದ ಮಾರನೇ ದಿನ ಗ್ರಾಮದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತಿದೆ. ಗ್ರಾಮದ ಯುವಕರು ಒಬ್ಬರಿಗೊಬ್ಬರು ಪರಸ್ಪರ ಸಗಣಿ ಎರಚಾಡಿ, ಸಗಣಿ ಗುಡ್ಡೆಯಲ್ಲೇ ಉರುಳಾಡಿ ಸಂಭ್ರಮಿಸುವ ಮೂಲಕ ಸೌಹಾರ್ದತೆ ಮೆರೆಯುವುದು ಮತ್ತು ಮನೆಹಾಳು ಮಾಡುವ ಚಾಡಿಕೋರನನ್ನು ಊರಿನಲ್ಲಿ ದಹಿಸುವುದು ಹಬ್ಬದಲ್ಲಿ ಕಂಡು ಬರುತ್ತದೆ.

ಹಬ್ಬದ ಆಚರಣೆ ಕುರಿತಂತೆ ತಿಳಿಯುತ್ತಾ ಹೋದರೆ ಒಂದಷ್ಟು ಮಾಹಿತಿ ಲಭಿಸುತ್ತದೆ. ಅದು ಏನೆಂದರೆ ಗುಮಟಾಪುರ ಗ್ರಾಮದ ಗೌಡನ ಮನೆಗೆ ಗುಡ್ಡಪ್ಪ ಕೆಲಸಕ್ಕೆ ಸೇರಿದ್ದನು. ಈತ ಇದ್ದಕ್ಕಿದ್ದಂತೆ ಮರಣ ಹೊಂದಿದನು. ಆತ ಬಳಸುತ್ತಿದ್ದ ಜೋಳಿಗೆಯನ್ನು ತಿಪ್ಪೆಗೆ ಎಸೆಯಲಾಗಿತ್ತು. ಇದಾದ ಕೆಲ ದಿನಗಳ ನಂತರ ಗೌಡನ ಎತ್ತಿನ ಗಾಡಿ ಜೋಳಿಗೆ ಎಸೆಯಲಾಗಿದ್ದ ತಿಪ್ಪೆಯಲ್ಲಿ ಹಾದು ಹೋಗುವಾಗ ಎತ್ತಿನ ಗಾಡಿಯ ಚಕ್ರಕ್ಕೆ ಆ ಜೋಳಿಗೆ ಸಿಕ್ಕಿ ಹಾಕಿಕೊಂಡಿತು. ಈ ವೇಳೆ ಸಮೀಪದಲ್ಲಿಯೇ ಇದ್ದ ಶಿವಲಿಂಗದಿಂದ ರಕ್ತ ಬರತೊಡಗಿತು. ಇದೆಲ್ಲ ಘಟನೆಗಳಿಂದ ಗೌಡರು ಚಿಂತಾಕ್ರಾಂತರಾದರು. ಆದರೆ  ಅದೇ ದಿನ ರಾತ್ರಿ ಗೌಡರ ಕನಸಿನಲ್ಲಿ ದೇವರು ಕಾಣಿಸಿಕೊಂಡು ಈ ದೋಷ ನಿವಾರಣೆಗಾಗಿ ಗ್ರಾಮದಲ್ಲಿ ಗುಡಿಯೊಂದನ್ನು ನಿರ್ಮಿಸಬೇಕು. ದೀಪಾವಳಿ ಹಬ್ಬದ ಮರುದಿನ ಸಗಣಿ ಹಬ್ಬ ಆಚರಿಸಬೇಕು ಎಂದು ಹೇಳಿ ಮಾಯವಾದಂತೆ ಭಾಸವಾಯಿತು. ಮಾರನೆಯ ದಿನವೇ ತಿಪ್ಪೆ ಸ್ಥಳದಲ್ಲಿ ಬೀರಪ್ಪನ ಗುಡಿ ಕಟ್ಟಿ ಸಗಣಿ ಹಬ್ಬ ಆಚರಿಸಿಕೊಂಡು ಹೋಗಲು ತೀರ್ಮಾನಿಸಲಾಯಿತಂತೆ. ಅಲ್ಲಿಂದ ಇಲ್ಲಿ ತನಕ ಹಬ್ಬ ನಡೆಯುತ್ತಾ ಬರುತ್ತಿದೆಯಂತೆ.

ಇನ್ನು ಹಬ್ಬದ ದಿನದಂದು ಗ್ರಾಮದ ಯುವಕನೊಬ್ಬನನ್ನು ಕತ್ತೆ ಮೇಲೆ ಕೂರಿಸಿಕೊಂಡು ಗ್ರಾಮದ ಪ್ರಮುಖ ಬಡಾವಣೆಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಕತ್ತೆ ಮೇಲೆ ಕುಳಿತ ಈತನನ್ನು  ಚಾಡಿಕೋರ ಎಂದು ಸಂಭೋದಿಸಲಾಗುತ್ತದೆ. ಮೆರವಣಿಗೆ ವೇಳೆ ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗುತ್ತದೆ. ಇದೂ ಕೂಡ ಹಬ್ಬದ ಆಚರಣೆಯ ಮತ್ತೊಂದು ವಿಶೇಷ.

ಇದಕ್ಕೂ ಮುನ್ನ ಗೋವುಗಳು ಹಾಕಿದ ಸಗಣಿಯನ್ನು ಗ್ರಾಮದ ದೇವಸ್ಥಾನದ ಬಳಿ ಸುರಿಯಲಾಗುತ್ತದೆ. ಮತ್ತೊಂದೆಡೆ ಮಕ್ಕಳು ಮನೆಗಳಿಂದ ಬೇಡಿ ತಂದ ಎಣ್ಣೆಯಿಂದ ಪೂಜೆ ಸಲ್ಲಿಸಿ, ನಂತರ ಸಮೀಪದಲ್ಲಿಯೇ ಇರುವ ಕಾರಪ್ಪ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ.

ಯುವಕನಿಗೆ ಹುಲ್ಲಿನ ಮೀಸೆ, ಗಡ್ಡ ಮಾಡಿ ಕಟ್ಟಿ ಬಳಿಕ ಆತನನ್ನು ಕತ್ತೆಯೊಂದರಲ್ಲಿ ಕೂರಿಸಿ ಗ್ರಾಮದ ಕೆರೆಯಿಂದ ಪ್ರಮುಖ ಬಡಾವಣೆಗಳಲ್ಲಿ ಮೆರವಣಿಗೆ ಮಾಡಿ ಬೀರೇಶ್ವರನ ದೇವಸ್ಥಾನದವರೆಗೂ ಮೆರವಣಿಗೆಯಲ್ಲಿ ಕರೆತರಲಾಗುತ್ತದೆ. ಈ ವೇಳೆ ಕತ್ತೆ ಮೇಲೆ ಕುಳಿತಿದ್ದವನಿಗೆ ಅಶ್ಲೀಲ ಪದಗಳಿಂದ ನಿಂದಿಸುತ್ತಾರೆ. ನಂತರ ಆತನ ಹುಲ್ಲಿನ ಮೀಸೆ ಹಾಗೂ ಗಡ್ಡ ತೆಗೆದು ಸಗಣಿ ರಾಶಿಯಲ್ಲಿ ಇರಿಸಿ ಬೀರೇಶ್ವರನಿಗೆ ಪೂಜೆ ಸಲ್ಲಿಸಿ ನಂತರ ಸಗಣಿಯಾಟ ನಡೆಯುತ್ತದೆ.

See also  ಚೆನ್ನಿಪುರ ಮೋಳೆ ಶಾಲೆಯಲ್ಲಿ ಗಿಡಗಳಿಗೆ ಹುಟ್ಟುಹಬ್ಬ

ಗ್ರಾಮದ ಯುವಕರು ಸಗಣಿಯನ್ನು ಉಂಡೆ ಮಾಡಿಕೊಂಡು ಒಬ್ಬರಿಗೊಬ್ಬರು ಹೊಡೆದಾಡಿ, ಸಗಣಿ ರಾಶಿಯಲ್ಲಿ ಉರುಳಾಡುತ್ತಾರೆ. ಈ ವಿಶಿಷ್ಟ ಆಚರಣೆ ಮುಗಿದ ನಂತರ ಚಾಡಿಕೋರ ಗುಡ್ಡದಲ್ಲಿ ಹಿಡಿಕಟ್ಟೆಗಳಿಂದ ಗೊಂಬೆಯೊಂದನ್ನು ನಿರ್ಮಿಸಿ ಸುಡುತ್ತಾರೆ. ನಂತರ ಸಗಣಿಯಾಟದಲ್ಲಿ ಪಾಲ್ಗೊಂಡಿದ್ದ ಯುವಕರು ಕೆರೆಗೆ ತೆರಳಿ ಸ್ನಾನ ಮಾಡಿ ಮನೆಗಳಿಗೆ ತೆರಳುವ ಮೂಲಕ ಗೋರೆ ಹಬ್ಬ ಮುಗಿದು ಹೋಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು