ಕಾರವಾರ: ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಳಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಹೆಸರಾಂತ ಜಾನಪದ ರಂಗಭೂಮಿ ಕಲಾವಿದ ಪರಶುರಾಮ ಸಿದ್ಧಿ ಈ ಪ್ರಶಸ್ತಿಗೆ ಲಭಿಸಿದೆ.
ಒಟ್ಟೂ 64 ವ್ಯಕ್ತಿ/ಸಂಸ್ಥೆಗಳಿಗೆ ಪ್ರಶಸ್ತಿ ಪ್ರಕಟವಾಗಿದ್ದು, ರಂಗಭೂಮಿ ಕ್ಷೇತ್ರದಲ್ಲಿ ಪರಶುರಾಮ ಸಿದ್ಧಿ ಸಾಧಿಸಿದ ಸಾಧನೆ ಹಾಗು ಸಲ್ಲಿಸಿದ ಸೇವೆ ಗುರುತಿಸಿ ಈ ಪ್ರಶಸ್ತಿ ಘೋಷಿಸಲಾಗಿದೆ.
ಪರಶುರಾಮ ಗಿರಿಗೋಲಿ ಸಿದ್ಧಿ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚೀಕೇರಿ ಭಾಗದ ಶಿರನಾಲೆ ಬಳಿಯ ಹಲಗೋಡು ಗ್ರಾಮದವರು. 1984 ರಿಂದಲೇ ಸಿದ್ಧಿ ಜನಾಂಗದ ಕಲೆ-ಸಂಸ್ಕೃತಿಯ ಏಳಿಗೆಯ ಜೊತೆಗೆ ಸಿದ್ಧಿ ಜನಾಂಗದ ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ.
ಇವರು ತಮ್ಮ ಮಕ್ಕಳಾದ ಗಿರಿಜಾ ಸಿದ್ಧಿ ಮತ್ತು ಗೀತಾ ಸಿದ್ಧಿಯವರ ಜೊತೆಗೆ ಇನ್ನೂ ಆಸಕ್ತ 7 ವಿದ್ಯಾರ್ಥಿಗಳಿಗೆ ನೀನಾಸಮ್ ತರಬೇತಿ ನಡೆಸಲು ಪ್ರೋತ್ಸಾಹ ನೀಡಿದ್ದಾರೆ.
ಮಗಳಾದ ಗಿರಿಜಾ ಸಿದ್ಧಿಯು ನೀನಾಸಮ್ ತರಬೇತಿ ನಂತರ ಹಿಂದುಸ್ತಾನಿ ಗಾಯನದಲ್ಲಿ ತರಬೇತಿ ಪಡೆಯುತ್ತಿದ್ದರೆ, ಇನ್ನೊಬ್ಬ ಮಗಳು ಗೀತಾ ಸಿದ್ಧಿ ಕನ್ನಡ ರಂಗಭೂಮಿಯಲ್ಲಿ ಮಹಿಳೆಯರ ಪಾತ್ರದ ಕುರಿತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಮಾಡುತ್ತಿದ್ದಾರೆ. ಪರಶುರಾಮರವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು ರಂಗಭೂಮಿಗೆ ಕಲಾವಿದರಿಗೆ ದೊರೆತ ಗೌರವ ಎಂಬುದು ಗಣ್ಯರ ಅಭಿಪ್ರಾಯವಾಗಿದೆ.