ಕಾಸರಗೋಡು: ಮಂಜೇಶ್ವರ ಮೂಡಂಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಲಯಾಳಿ ಶಿಕ್ಷಕರ ನೇಮಕ ವಿರುದ್ಧ ಕನ್ನಡಿ ಗರು ಹೋರಾಟಕ್ಕೆ ಮುಂದಾಗಿದ್ದಾರೆ. ಶಾಲಾ ವಿದ್ಯಾರ್ಥಿಗಳು , ಪೋಷಕರು ಅನಿರ್ಧಿಷ್ಟಾವಧಿ ಹೋರಾಟಕ್ಕೆ ತೀರ್ಮಾನಿಸಿದ್ದಾರೆ.
ತಿರುವವನಂತ ಪುರ ಮೂಲದ ಶಿಕ್ಷಕರರೋರ್ವರನ್ನು ಈ ಶಾಲೆಗೆ ನೇಮಿಸಲಾಗಿದ್ದು , ಕನ್ನಡ ಅರಿಯದ ಶಿಕ್ಷಕನ ನೇಮಕ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಭೌತ ಶಾಸ್ತ್ರಕ್ಕೆ ಮಲಯಾಳಿ ಶಿಕ್ಷಕರೋರ್ವರನ್ನು ನೇಮಿಸಲಾಗಿದೆ.
ಸೋಮವಾರ ಮೂಡಂಬೈಲ್ ಶಾಲೆಯಲ್ಲಿ ಸೇರಿದ ತುರ್ತುಸಭೆಯಲ್ಲಿ ಹೋರಾಟದ ಕುರಿತು ಚರ್ಚಿಸಲಾಯಿತು . ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಸಭೆಯನ್ನು ಉದ್ಘಾಟಿಸಿ ದರು. ರಾಜಕೀಯ ಮುಖಂಡ ಕುಂಟಾರು ರವೀಶ ತಂತ್ರಿ, ವಾರ್ಡ್ ಸದಸ್ಯ ಜಯರಾಮ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಂಚಿಲ ಮೊಹಮ್ಮದ್, ವಾರ್ಡ್ ಸದಸ್ಯೆ ಚಂದ್ರಾವತಿ, ಶಾಲಾ ಪರಿಸರದ ನಿವಾಸಿ ಜಗದೀಶ್ ಮೂಡಂಬೈಲ್, ಮೀಯಪದವು ಹೈಯರ್ ಸೆಕೆಂಡರಿ ಶಾಲೆಯ ಮ್ಯಾನೇಜರ್ ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ, ಹಿರಿಯ ಕನ್ನಡ ಹೋರಾಟಗಾರರಾದ ಶಿವರಾಮ ಪದಕಣ್ಣಾಯ, ಕನ್ನಡ ಹೋರಾಟ ಸಮಿತಿ ಕಾರ್ಯದರ್ಶಿ ಭಾಸ್ಕರ ಕಾಸರಗೋಡು, ನಿವೃತ್ತ ಮುಖ್ಯ ಶಿಕ್ಷಕ ಟಿ.ಡಿ. ಸದಾಶಿವರಾವ್, ಗೋಪಾಲಶೆಟ್ಟಿ ಅರಿಬೈಲ್, ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷರಾದ ಕೆ. ರವೀಂದ್ರನಾಥ್, ನಿವೃತ್ತ ಮುಖ್ಯ ಶಿಕ್ಷಕ ರಾಮ ಮಾಸ್ಟರ್, ನಾಗರಾಜ ಪದಕಣ್ಣಾಯ ಉಪಸ್ಥಿತರಿದ್ದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಬ್ಬಾಸ್ ಸ್ವಾಗತಿಸಿದರು.