ಮಡಿಕೇರಿ: ಜಿಲ್ಲೆಯ ಕಂದಾಯ ಇಲಾಖೆ ಸಿಬ್ಬಂದಿಗಳು ಕರ್ತವ್ಯದ ವೇಳೆಯಲ್ಲಿ ಕಚೇರಿಯಲ್ಲಿ ಹಾಜರಿರದೆ ಇರುವುದರಿಂದ ಸಾರ್ವಜನಿಕರ ಅರ್ಜಿಗಳು ಸಕಾಲದಲ್ಲಿ ವಿಲೇವಾರಿಗುತ್ತಿಲ್ಲವೆಂದು ಆರೋಪಿಸಿರುವ ವೀರನಾಡು ರಕ್ಷಣಾ ವೇದಿಕೆ, ಎಲ್ಲಾ ಸರಕಾರಿ ಕಚೇರಿಗಳ ಪಂಚಿಂಗ್ ಯಂತ್ರವನ್ನು ದುರಸ್ತಿ ಪಡಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಹರೀಶ್ ಜಿ.ಆಚಾರ್ಯ ಅವರು, ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಆರ್‍ಐ ಹಾಗೂ ಬಹುತೇಕ ಸಿಬ್ಬಂದಿಗಳು ಕರ್ತವ್ಯದ ವೇಳೆಯಲ್ಲಿ ಕಚೇರಿಯಲ್ಲಿ ಹಾಜರಿರುವುದಿಲ್ಲ. ಅರ್ಜಿದಾರರು ಯಾವಾಗ ಕಚೇರಿಗೆ ಹೋದರೂ ಸಿಬ್ಬಂದಿಗಳು ಸಭೆಗಳಿಗೆ ಹೋಗಿದ್ದಾರೆ ಎನ್ನುವ ಉತ್ತರ ಕೇಳಿ ಬರುತ್ತಿದೆ ಎಂದು ಆರೋಪಿಸಿದರು.
ರೈತರು, ಗ್ರಾಮಸ್ಥರು ಹಾಗೂ ನಾಗರೀಕರು ದೂರದ ಊರಿನಿಂದ ಕಂದಾಯ ಇಲಾಖೆಗೆ ಅಲೆದು ಕಂಗಾಲಾಗಿದ್ದಾರೆ. ರೈತರಿಗೆ, ಗ್ರಾಮಸ್ಥರಿಗೆ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕಾದರೆ ಜಿಲ್ಲಾಧಿಕಾರಿಗಳು, ಎಲ್ಲಾ ಸರಕಾರಿ ಕಚೇರಿಗಳ ಪಂಚಿಂಗ್ ಯಂತ್ರಗಳನ್ನು ದುರಸ್ತಿ ಪಡಿಸಲು ಕ್ರಮ ಕೈಗೊಳ್ಳಬೇಕು. ಕಚೇರಿಗೆ ಬರುವಾಗ ಮತ್ತು ಹೊರಗೆ ಹೋಗುವಾಗ ಪಂಚ್ ಮಾಡಿದರೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಚೇರಿ ಸಮಯದಲ್ಲಿ ಕಾಲಹರಣ ಮಾಡುವುದು ತಪ್ಪಿದಂತ್ತಾಗುತ್ತದೆ. ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತದೆ ಎಂದು ಹರೀಶ್ ಜಿ. ಆಚಾರ್ಯ ಅಭಿಪ್ರಾಯಪಟ್ಟರು.
ಹಲವಾರು ಗದ್ದೆಗಳನ್ನು ತೋಟವನ್ನಾಗಿ ಪರಿವರ್ತಿಸಿರುವ ರೈತರು ಕಾಫಿಯನ್ನು ಬೆಳೆದಿದ್ದಾರೆ, ಆದರೆ ಬೆಳೆ ಸಾಲಕ್ಕಾಗಿ ಆರ್‍ಟಿಸಿ ತೆಗೆದಾಗ ನೋ ಕ್ರಾಪ್ (ಬೆಳೆ ಇಲ್ಲ) ಅಥವಾ ಗದ್ದೆ ಎಂದೇ ಬರುತ್ತಿದೆ. ಇದರಿಂದಾಗಿ ರೈತರಿಗೆ ಅಡ್ಡಿ, ಆತಂಕಗಳು ಎದುರಾಗಿದೆ. ಕಂದಾಯ ಅಧಿಕಾರಿಗಳು ಜಾಗವನ್ನು ಸರ್ವೇ ಮಾಡಿ ವರದಿಯನ್ನು ಕಂಪ್ಯೂಟರ್‍ಗೆ ಅಳವಡಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಮಹಾಮಳೆಯ ಅವಾಂತರ ಒಂದೆಡೆಯಾದರೆ ಮತ್ತೊಂದೆಡೆ ಕಂದಾಯ ಇಲಾಖೆಯ ಅಧಿಕಾರಿಗಳ ಅಸಡ್ಡೆಯಿಂದ ರೈತರಿಗೆ ಹಾಗೂ ಗ್ರಾಮಸ್ಥರಿಗೆ ಕಿರುಕುಳವಾಗುತ್ತಿದೆ ಎಂದು ಹರೀಶ್ ಜಿ.ಆಚಾರ್ಯ ಆರೋಪಿಸಿದರು.
ಜಿಲ್ಲಾಧಿಕಾರಿಗಳು ತಕ್ಷಣ ಅಧಿಕಾರಿಗಳಿಗೆ ಆದೇಶ ನೀಡಿ ಸರ್ವೇ ಮಾಡಿದ ಜಾಗದ ವಿವರಣೆಯನ್ನು ಕಂಪ್ಯೂಟರಿಗೆ ಅಳವಡಿಸುವಂತೆ ನೋಡಿಕೊಳ್ಳಬೇಕು. ಕೊಡಗಿನ ಕಂದಾಯ ಇಲಾಖೆಯಲ್ಲಿ ಐದು ವರ್ಷಕ್ಕಿಂತ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದ ಅವರು ತಪ್ಪಿದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಂದಾಯ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸಾರ್ವಜನಿಕರು ಕಾನೂನು ಬದ್ದವಾಗಿ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸುವ ಧೈರ್ಯ ಮಾಡಬೇಕಾಗಿದೆ. ಯಾವ ಕಾರಣಕ್ಕಾಗಿ ಕೆಲಸ ಮಾಡಲಿಲ್ಲ ಎಂದು ಹಿಂಬರಹ ಪಡೆಯಬೇಕು. ಸಾರ್ವಜನಿಕರ ಪರವಾಗಿ ನಮ್ಮ ಸಂಘಟನೆ ಮಾಡಲಿದೆ ಎಂದು ಹರೀಶ್ ಜಿ.ಆಚಾರ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪ್ರಮುಖರಾದ ಪಳಂಗಂಡ ಈಶ್ವರ್, ಪೊರ್ಕೆರ ಉತ್ತಪ್ಪ, ಮೂಡ್ಲಿಗೆ ಮನೆ ಗಣೇಶ್, ಕೋಳಿಬೈಲು ಜಯರಾಂ ಹಾಗೂ ಇ.ಎಲ್.ಸುರೇಶ್ ಉಪಸ್ಥಿತರಿದ್ದರು.