ಯಳಂದೂರು: ತಾಲೂಕಿನ ಅಗರ-ಮಾಂಬಳ್ಳಿ ಗ್ರಾಮದಲ್ಲಿ ಶ್ರೀ ಹಿಂಡಿಮಾರಮ್ಮನ ಕೊಂಡೋತ್ಸವ ಸುರಿಯುವ ಮಳೆಯಲ್ಲೇ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಹಬ್ಬದ ನಿಮಿತ್ತ ಹಿಂಡಿಮಾರಮ್ಮ ದೇವಿಗೆ ವಿಶೇಷ ಅಲಂಕಾರ, ಹೋಮ, ಹವನಗಳನ್ನು ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ತಮ್ಮಡಿಗಳು ದೇವಿಯ ಉತ್ಸವ ಮೂರ್ತಿಯೊಂದಿಗೆ ರಾಷ್ಟ್ರೀಯ ಹೆದ್ದಾರಿ 209 ಪಕ್ಕದಲ್ಲಿ ಹಾಕಿದ್ದ ಕೊಂಡದ ಸ್ಥಳಕ್ಕೆ ತೆರಳಿ ಕೊಂಡವನ್ನು ಹಾಯ್ದರು, ತಮ್ಮಡಿಗಳಲ್ಲದೆ, ಈ ಕೊಂಡಕ್ಕೆ ಹರಕೆ ಹೊತ್ತು ಬಂದಿದ್ದ ನೂರಾರು ಭಕ್ತರು ತಮ್ಮಡಿಗಳ ನಂತರ ಕೊಂಡವನ್ನು ಹಾಯ್ದು ಹರಕೆ ತೀರಿಸಿದರು.
ಇನ್ನು ಗ್ರಾಮದಲ್ಲಿ ಹರಕೆ ಹೊತ್ತಿದ್ದ 100ಕ್ಕೂ ಹೆಚ್ಚು ಭಕ್ತರು ತಮ್ಮ ಬಾಯಿಗೆ ಬೀಗಗಳನ್ನು ಹಾಕಿಕೊಂಡು ಕೊಂಡವನ್ನು ಹಾಯುವ ಮೂಲಕ ಹರಕೆಗಳನ್ನು ತೀರಿಸಿದರು. ತಮ್ಮ ಇಷ್ಟಾರ್ಥಗಳನ್ನು ಮಾರಮ್ಮ ದೇವಿಯ ಬಳಿ ಹರಕೆ ಹೊತ್ತಿದ್ದ ಭಕ್ತರು ತಮ್ಮ ಹರಕೆಗಳು ಫಲಪ್ರದವಾದ ನಂತರ ದೀಪಾವಳಿ ಸಮಯದಲ್ಲಿ ನಡೆಯುವ ಕೊಂಡೋತ್ಸವದಲ್ಲಿ ತಮ್ಮ ಬಾಯಿಗೆ ದೇವಸ್ಥಾನದ ತಮ್ಮಡಿಗಳಿಂದ ಕಬ್ಬಿಣದ ತಂತಿಗಳಿಂದ ಬಾಯಿಗೆ ಬೀಗ ಹಾಕಿಸಿಕೊಂಡು ದೇವಸ್ಥಾನದಿಂದ ಹೊರಟು ಕೊಂಡೋತ್ಸವವು ನಡೆಯುವ ಸ್ಥಳದವರೆಗೆ ಮಾರಮ್ಮ ದೇವಿಯ ಉತ್ಸವ ಮೂರ್ತಿಯ ಜೊತೆ ಹೋಗಿ ತಮ್ಮಡಿಗಳು ಕೊಂಡವನ್ನು ಹಾಯ್ದ ನಂತರ ಇವರು ಕೊಂಡವನ್ನು ಹಾಯುವುದು ಹಿಂದಿನಿಂದಲೂ ನಡೆದು ಬಂದ ಆಚರಣೆಯಾಗಿದೆ.