ಮಡಿಕೇರಿ: ಪ್ರಸ್ತುತ ವರ್ಷ ಆಗಸ್ಟ್ ತಿಂಗಳಿನಲ್ಲಿ ಕೊಡಗು ಜಿಲ್ಲೆಯಲ್ಲಿ ನಿರಂತವಾಗಿ ಸುರಿದ ಮಳೆಯಿಂದಾಗಿ ಪ್ರಾಣಹಾನಿ ಮತ್ತು ಸಾಕಷ್ಟು ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದೆ. ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸಲು ಸರ್ಕಾರೇತರ ಸಂಸ್ಥೆಗಳು, ಸಾಮಾಜಿಕ ಜವಾಬ್ದಾರಿ ವಿಭಾಗ, ನಾಗರಿಕ ಸಮಾಜ ಸಂಸ್ಥೆಗಳು, ಉದಾರ ದಾನಿಗಳು ಹಾಗೂ ಇತರ ಪಾಲುದಾರರನ್ನು ಪ್ರವಾಹ “2018-19 ರ ಸ್ಪಂದನೆ”ಯ ಸಹಾಯಕ್ಕೆ ಜಿಲ್ಲಾಡಳಿತ ಆಹ್ವಾನಿಸಿದೆ.
ಮಹಾಮಳೆ ಹಾನಿಯಿಂದ ಸರಿ ಸುಮಾರು 1 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. 2018 ಮತ್ತು 2019ರ ಪ್ರಕೃತಿ ವಿಕೋಪದಲ್ಲಿ ಸುಮಾರು 40 ಮಾನವ ಜೀವಹಾನಿ ಹಾಗೂ 352 ಜಾನುವಾರುಗಳು ಅಸುನೀಗಿವೆ. ಸುಮಾರು 6,397 ಮನೆಗಳು, 265 ಅಂಗನವಾಡಿಗಳು, 239 ಶಾಲೆಗಳು ಹಾಗೂ 20 ಆರೋಗ್ಯ ಕೇಂದ್ರ ಕಟ್ಟಡಗಳು ಹಾನಿಗೀಡಾಗಿವೆ. ಹೀಗೆ 1736 ಕೋಟಿ ರೂ.ಗಳಷ್ಟು ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟಾಗಿದೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜಿಲ್ಲಾಡಳಿತ, ಭೂಸೇನೆ, ಎನ್‍ಡಿಆರ್‍ಎಫ್/ಎಸ್‍ಡಿಆರ್‍ಎಫ್, ಸ್ಥಳೀಯರ ಸಹಾಯದಿಂದ ರಕ್ಷಣಾ ಹಾಗೂ ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ. ಮಳೆಹಾನಿ ಪ್ರದೇಶದ ಪುನರ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಆದರೆ ಪ್ರವಾಹದ ಪರಿಹಾರ ಮತ್ತು ಚೇತರಿಕೆಯ ಅಂಶಗಳಾದ ನೀರು, ಸ್ವಚ್ಛತೆ, ನೈರ್ಮಲ್ಯ, ವಸತಿ, ಆಹಾರ ಮತ್ತು ಪೌಷ್ಟಿಕಾಂಶ, ಶಾಲೆ ಮತ್ತು ಅಂಗನವಾಡಿಗಳ ಪುನರ್ ನಿರ್ಮಾಣ ಜೀವನೋಪಾಯ ಚೇತರಿಕೆ, ದುರ್ಬಲ ಸಮುದಾಯಗಳ (ಮಹಿಳೆ, ಮಕ್ಕಳು, ವಿಕಲಚೇತನರು, ವೃದ್ಧರು) ರಕ್ಷಣೆ ಮತ್ತಿತರ ವಲಯವಾರು ಅವಶ್ಯಕತೆಗಳು ಆಗಬೇಕಾಗಿದೆ.
ನ.6 ರಂದು ಸಭೆ
ಈ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತ ಗ್ರಾಮಗಳು, ನೇರೆ ಸಂತ್ರಸ್ತರಿಗೆ ಪರಿಹಾರ ಪುನರ್‍ವಸತಿ ಮತ್ತು ಚೇತರಿಕೆ ಕ್ರಮಗಳ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮನ್ವಯ ಸಭೆ ನ.6 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ. ಇಚ್ಛೆ ಇರುವ ಸರ್ಕಾರೇತರ ಸಂಸ್ಥೆಗಳು ಸಭೆಯಲ್ಲಿ ಪಾಲ್ಗೊಳ್ಳಬಹುದೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.