ಕಾಸರಗೋಡು : ಕನ್ನಡ ಮಾಧ್ಯಮ ಶಾಲೆಗಳಿಗೆ ಕನ್ನಡೇತರ ಶಿಕ್ಷಕರ ನೇಮಕದ ಬಗ್ಗೆ ತಾನು ಸರಕಾರದ ಗಮನಕ್ಕೆ ತಂದಿದ್ದೇನೆ. ಈ ಬಗ್ಗೆ ಶಿಕ್ಷಣ ಸಚಿವರ ಜೊತೆ ಮಾತುಕತೆ ನಡೆಸಿದ್ದೇನೆ . ಕನ್ನಡ ಪಾಠಕ್ಕೆ ಕನ್ನಡ ಶಿಕ್ಷಕರನ್ನು ನೇಮಿಸಬೇಕು. ಮೂಡಂಬೈಲು ಕನ್ನಡ ಶಾಲೆಯಲ್ಲಿ ಮಲಯಾಳ ಶಿಕ್ಷಕರನ್ನು ನೇಮಿಸಲಾಗಿದೆ. ಇದು ಸರಿ ಅಲ್ಲ . ಈ ಬಗ್ಗೆ ಯಾವುದೇ ರೀತಿಯ ಹೋರಾಟಕ್ಕೂ ಬದ್ದ , ವಿಧಾನಸಭಾ ಅಧಿವೇಶದಲ್ಲಿ ಅವಕಾಶ ಸಿಕ್ಕಿದರೆ ಮತ್ತೆ ಧ್ವನಿಯೆತ್ತುವೆ ಎಂದು ಮಂಜೇಶ್ವರ ಶಾಸಕ ಎಂ .ಸಿ ಖಮರುದ್ದೀನ್ ಹೇಳಿದರು.
ಶಾಸಕರಾಗಿ ಆಯ್ಕೆಯಾದ ಬಳಿಕ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿ ಇಂದು ( ಶನಿವಾರ ) ಉಪ್ಪಳ ರೈಲು ನಿಲ್ದಾಣದಲ್ಲಿ ಬಂದಿಳಿದ ಶಾಸಕರು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.
ಮೊದಲ ಬಾರೀ ಆಯ್ಕೆಯಾದ ತನಗೆ ಮೊದಲ ಅಧಿವೇಶನದಲ್ಲೇ ಮಂಜೇಶ್ವರ ಕ್ಷೇತ್ರದ ಸಮಸ್ಯೆಗಳನ್ನು ಮುಂದಿಡಲು ಸಾಧ್ಯವಾಯಿತು . ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಸರಕಾರದ ಗಮನಸೆಳೆದಿದ್ದು , ಶೀಘ್ರ ಕಾಮಗಾರಿ ಆರಂಭಿಸುವ ಭರವಸೆ ಲಭಿಸಿದೆ. ಉಪ್ಪಳ ಮುಸೋಡಿ , ಕೊಯಿಪಾಡಿ ಹಾಗೂ ಇತರ ಕಡೆಗಳಲ್ಲಿನ ಕಡಲ್ಕೊರೆತ ಕ್ಕೆ ಶಾಶ್ವತ ಪರಿಹಾರ ಕಾಣುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಸಚಿವರ ಜೊತೆ ಮಾತುಕತೆ ನಡೆಸಿದ್ದೇನೆ . ಕುಂಬಳೆ ಸರಕಾರೀ ಆಸ್ಪತ್ರೆ ಬಗ್ಗೆಯೂ ಸಚಿವರಿಗೆ ಮನವಿ ಮಾಡಿದ್ದು , ಇದಕ್ಕೂ ಶೀಘ್ರ ಪರಿಹಾರ ಲಭಿಸಲಿದೆ.
ಕ್ಷೇತ್ರದ ಜನತೆಯ ಸಮಸ್ಯೆ , ಅಭಿವೃದ್ಧಿ ಗೆ ಗಮನ ನೀಡುವ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯುವುದಾಗಿ ಶಾಸಕರು ಹೇಳಿದರು. ಶಾಸಕರನ್ನು ರೈಲು ನಿಲ್ದಾಣದಲ್ಲಿ ಯು ಡಿ ಎಫ್ ಕಾರ್ಯಕರ್ತರು ಭವ್ಯ ಸ್ವಾಗತ ನೀಡಿ ಉಪ್ಪಳ ಪೇಟೆ ತನಕ ಮೆರವಣಿಗೆಯಲ್ಲಿ ಕರೆತಂದರು