ಬೇಲೂರು: ರಸ್ತೆ ದಾಟುತ್ತಿದ್ದ ಜಿಂಕೆಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ ಘಟನೆ ತಾಲೂಕಿನ ಗಡಿ ಗ್ರಾಮವಾದ ಕಡೆಗರ್ಜೆ ಗ್ರಾಮದ ಬಳಿ ನಡೆದಿದೆ.
ಮಲೆನಾಡ ಭಾಗದ ಬಿಕ್ಕೋಡು, ಅರೆಹಳ್ಳಿ ವ್ಯಾಪ್ತಿಯಲ್ಲಿ ಜಿಂಕೆ, ಸಾರಂಗಗಳು ಹೆಚ್ಚಾಗಿದ್ದು ಕೆಲವೊಮ್ಮೆ ಗ್ರಾಮದೊಳಕ್ಕೆ ಬರುತ್ತವೆ. ಇದೇ ರೀತಿ ಶನಿವಾರ ರಾತ್ರಿ ರಸ್ತೆ ದಾಟುತ್ತಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡು ಒದ್ದಾಡುತ್ತಿದ್ದ ಜಿಂಕೆಯನ್ನು ಕಂಡ ಗ್ರಾಮಸ್ಥರು ಅರೇಹಳ್ಳಿ ಅರಣ್ಯ ಇಲಾಖೆ ಉಪವಲಯದ ಅಧಿಕಾರಿ ಗುರುರಾಜ್‌ರವರಿಗೆ ವಿಷಯ ತಿಳಿಸಿದ್ದಾರೆ. ಅಲ್ಲದೆ, ವಲಯ ಅರಣ್ಯಾಧಿಕಾರಿ ಮರಿಸ್ವಾಮಿ ಹಾಗೂ ಸಾರ್ವಜನಿಕರು ಜಿಂಕೆಯನ್ನು ಚಿಕಿತ್ಸೆಗೆಂದು ಬೇಲೂರು ಪಶು ಆಸ್ಪತ್ರೆಗೆ ಕರೆತರುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದೆ ಎನ್ನಲಾಗಿದೆ.
ಗಾಯಗೊಂಡ ಜಿಂಕೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆತಿದ್ದರೆ ಬದುಕುವ ಸಾಧ್ಯತೆಯಿತ್ತು. ಅರೇಹಳ್ಳಿ ಪಶು ವೈದ್ಯರು ದೂರವಾಣಿ ಕರೆ ಸ್ವೀಕರಿಸದ ಕಾರಣ ಕಡೆಗರ್ಜೆ ಸಮೀಪದಿಂದ ಬೇಲೂರಿಗೆ ಗಾಯಗೊಂಡ ಜಿಂಕೆಯೊAದಿಗೆ ಬರುವಷ್ಟರಲ್ಲಿ ಜಿಂಕೆ ಮೃತಪಟ್ಟಿದೆ ಎನ್ನುವ ಆರೋಪ ಕೇಳಿಬಂದಿದೆ.