ಸುಳ್ಯ: ನಗರದಲ್ಲಿನ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ತುರ್ತು ಗಮನ ಹರಿಸಬೇಕು ಎಂದು ಆಗ್ರಹಿಸಿ ಸುಳ್ಯ ನಗರ ಬಿಜೆಪಿ ಮತ್ತು ನಗರ ಪಂಚಾಯತ್ ಬಿಜೆಪಿ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಯಿತು.ಸಚಿವರನ್ನು ಭೇಟಿಯಾದ ಬಿಜೆಪಿ ಪ್ರಮುಖರು ಮತ್ತು ನ.ಪಂ.ಸದಸ್ಯರು ಮನವಿ ಸಲ್ಲಿಸಿದರು.
ಕಸ ವಿಲೇವಾರಿ ಅವ್ಯವಸ್ಥೆ; ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕಸ ವಿಲೇವಾರಿಗೆ ಸ್ಥಳ ಗುರುತಿಸಿ, ಕಸ ವಿಲೇವಾರಿ ಮಾಡದ ಕಾರಣ ನಗರದಲ್ಲಿ ತ್ಯಾಜ್ಯ ಸಮಸ್ಯೆ ತೀವ್ರಗೊಂಡಿದೆ. ಈ ಕುರಿತು ತುರ್ತು ಗಮನ ಹರಿಸಬೇಕು.
ಒಳಚರಂಡಿ ಯೋಜನೆ: ಒಳಚರಂಡಿ ಯೋಜನೆ ಅನುಷ್ಠಾನಗೊಂಡು ೧೫ ವರ್ಷ ಕಳೆದರೂ ಅಸಮರ್ಪಕ ಮತ್ತು ಅವೈಜ್ಞಾನಿಕ ಕಾಮಗಾರಿಯಿಂದ ಒಳಚರಂಡಿ ಸಂಪರ್ಕ ಸಾಧ್ಯವಾಗಿಲ್ಲ.
ಕುಡಿಯುವ ನೀರಿನ ವ್ಯವಸ್ಥೆ:
೩೦ ವರ್ಷಗಳ ಹಿಂದಿನ ಕುಡಿಯುವ ನೀರಿನ ಘಟಕ ವ್ಯವಸ್ಥೆ ಇದೆ. ಬೇಸಿಗೆಯಲ್ಲಿ ತಾತ್ಕಾಲಿಕ ಒಡ್ಡು ನಿರ್ಮಿಸಿ ನೀರು ಸರಬರಾಜು ಮಾಡಲಾಗುತ್ತದೆ. ಸುಳ್ಯ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ೬೪ ಕೋಟಿ ರೂ ಪ್ರಸ್ತಾವನೆ ಸಲ್ಲಿಸಿದರೂ ಮಂಜೂರಾತಿ ದೊರೆತಿಲ್ಲ. ಕೂಡಲೇ ಮಂಜೂರಾತಿ ನೀಡಬೇಕು.
ನಮೂನೆ ೩ನ್ನು ನೀಡುವಾಗ ಇರುವ ಗೊಂದಲ ಪರಿಹರಿಸಬೇಕು, ಬಿಪಿಎಲ್ ಪಡಿತರ ರದ್ದತಿಯ ದಂಡ ವಸೂಲಾತಿಯನ್ನು ರದ್ದು ಮಾಡಿ ಬಿಪಿಎಲ್ ಕಾರ್ಡ್ ಸ್ವಯಂ ರದ್ದತಿಗೆ ಕಾಲಾವಕಾಶ ನೀಡಬೇಕು, ನಗರ ಪಂಚಾಯತ್ ಚುನಾವಣೆ ನಡೆದು ೫ ತಿಂಗಳಾದರೂ ಅಧಿಕಾರ ಹಸ್ತಾಂತರ ಆಗಿಲ್ಲ. ಅಧಿಕಾರ ಹಸ್ತಾಂತರ ಕೂಡಲೇ ಮಾಡಬೇಕು, ಸುಳ್ಯ ತಾಲೂಕಿಗೆ ಅತೀ ಅಗತ್ಯವಾದ ೧೧೦ ಕೆವಿ ಸಬ್ ಸ್ಟೇಷನ್ ಕಾಮಗಾರಿ ಕೂಡಲೇ ಅನುಷ್ಠಾನ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಬಿಜೆಪಿ ನಗರಾಧ್ಯಕ್ಷ ವಿಜಯಕುಮಾರ್ ಕಂದಡ್ಕ, ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ಪಿ.ಕೆ.ಉಮೇಶ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ . ಹಿರಿಯರಾದ ನ.ಸೀತಾರಾಮ, ಸಿಎ ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ, ಪ್ರಮುಖರಾದ ಸೋಮನಾಥ ಪೂಜಾರಿ, ದಾಮೋದರ ಮಂಚಿ, ನಾರಾಯಣ ಶಾಂತಿನಗರ, ನ.ಪಂ.ಸದಸ್ಯರಾದ ಬಾಲಕೃಷ್ಣ ರೈ, ಸುಧಾಕರ, ಬುದ್ಧ ನಾಯ್ಕ್, ಸರೋಜಿನಿ ಪೆಲ್ತಡ್ಕ, ಕಿಶೋರಿ ಶೇಟ್, ಶಿಲ್ಪಾ ಸುದೇವ್, ಪ್ರವಿತಾ ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.