ಚಾಮರಾಜನಗರ: ಉಪಚುನಾವಣೆ ಬಳಿಕ ಪರಿಪೂರ್ಣ ಸರ್ಕಾರ ಬರಲಿದೆ ಎಂದು ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಬದಲಾಗುತ್ತೋ, ಇಲ್ಲವೋ ಅನೋದು ಮುಖ್ಯ ಅಲ್ಲ, ಈಗ ರಾಜ್ಯದಲ್ಲಿ ಪರಿಪೂರ್ಣ ಸರ್ಕಾರವಿಲ್ಲ. ಉಪ ಚುನಾವಣೆಯ ಫಲಿತಾಂಶದ ಬಳಿಕ ಪೂರ್ಣ ಪ್ರಮಾಣದ ಸರ್ಕಾರದಿಂದ ಉಳಿದ ಅವಧಿಯಲ್ಲಿ ಉತ್ತಮ ಕೆಲಸವಾಗಲಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಪಕ್ಷದಲ್ಲಿನ ಭಿನ್ನಾಭಿಪ್ರಾಯ ಬಗೆಹರಿಸಿ ಒಗ್ಗಟ್ಟಿನಿಂದ ಸರ್ಕಾರ ಮುನ್ನಡೆಸಲಿ ಎಂದ ಅವರು, ಕಾಂಗ್ರೆಸ್ ಪಕ್ಷದವರು ಉಪ ಚುನಾವಣೆಯ ಕನಸು ಕಾಣುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಯಲ್ಲಿದೆ ಎಂದರು.
ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ನೇತೃತ್ವದ ಕೋರ್ ಕಮಿಟಿ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮನಸ್ಸಿನ ಭಾವನೆಹಂಚಿಕೊಂಡಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಅವರು, ಕೋರ್ ಕಮಿಟಿ ಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿದ್ದವರು. ಸರ್ಕಾರದ ಬಗ್ಗೆ ಹಾಗೂ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಬಹುದು, ಕಾಂಗ್ರೆಸ್‌ನಲ್ಲಿ ನಿಜವಾದ ಅತೃಪ್ತ ಶಾಸಕ ಸಿದ್ದರಾಮಯ್ಯರಾಗಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಪತ್ರಬರೆದು ಅಸಮಾಧಾನ ತೋರಿಸಿದ್ದೇ ಸಿದ್ದರಾಮಯ್ಯ ಎಂದು ಹೇಳಿದ ಅವರು ಬಾದಾಮಿಲಿ ಗೆದ್ದು ಆಟ ಆಡ್ತಾ ಇದ್ದಾರೆ ಎಂದರು.
ದೇಶದಲ್ಲಿ ಕಾಂಗ್ರೆಸ್ ನೆಲಕಚ್ಚುತ್ತಿದೆ, ಪಕ್ಷ ಮುನ್ನಡೆಸಲಾಗದೆ ರಾಹುಲ್ ಗಾಂಧಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ತೊರೆದಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಹೀನಾಯವಾಗಿದೆ, ಮಂಗಳವಾರ ಸುಪ್ರೀಂಕೋರ್ಟ್ ನಿಂದ ಐತಿಹಾಸಿಕ ತೀರ್ಪು ಪ್ರಕಟವಾಗುವ ಸಂಭವವಿದ್ದು, ಆ ನಂತರ ಮುಂದಿನ ಬೆಳವಣಿಗೆ ತಿಳಿಯಲಿದೆ ಎಂದರು.