ಮಡಿಕೇರಿ: ಮಾನವನ ರಕ್ಷಣೆಗೆ ಕಾವಲು ಪಡೆಯಂತಿರುವ ಪಶ್ಚಿಮಘಟ್ಟ ಪ್ರದೇಶಗಳು ನಾಶವಾದ ಪರಿಣಾಮ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ ಎಂದು ಅಭಿಪ್ರಾಯಪಟ್ಟಿರುವ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನಿಸಾ, ಬೆಟ್ಟಗುಡ್ಡಗಳ ಮೇಲೆ ಕಟ್ಟಡ ನಿರ್ಮಿಸುವ ಸ್ವಯಂಕೃತ ಅಪರಾಧ ನಿಲ್ಲಬೇಕೆಂದು ಹೇಳಿದ್ದಾರೆ.
ನಗರದ ತ್ಯಾಗರಾಜ ಕಾಲೋನಿಯ ಕಾರುಣ್ಯ ಮೊಹಲ್ಲಾದಲ್ಲಿ ಜಮಾಅತೇ ಇಸ್ಲಾಮಿ ಹಿಂದ್‌ನ ಸಮಾಜ ಸೇವಾ ವಿಭಾಗವಾದ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ನಡೆದ ಎಂಟು ಮಳೆಹಾನಿ ಸಂತ್ರಸ್ತ ಕುಟುಂಬಗಳಿಗೆ ಮನೆಗಳನ್ನು ಹಸ್ತಾಂತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ನ್ಯಾಯಾಧೀಶರು ಮಾತನಾಡಿದರು.
ಜಲಸ್ಪೋಟ ಸೇರಿದಂತೆ ಪ್ರಾಕೃತಿಕ ವಿಕೋಪ ನಡೆಯುವುದನ್ನು ತಡೆಯಲು ಪಶ್ಚಿಮಘಟ್ಟ ಪ್ರದೇಶಗಳನ್ನು ಉಳಿಸುವ ಅಗತ್ಯವಿದೆ. ಪ್ರಕೃತಿಯನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಕೊಡಗು ಜಿಲ್ಲೆಯ ಬೆಟ್ಟಗುಡ್ಡಗಳು ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಗೆ ಒಳಪಡುತ್ತವೆ. ಗಾಳಿ ಮತ್ತು ಮಳೆಯಿಂದ ಅನಾಹುತಗಳು ಸಂಭವಿಸದಂತೆ ಬೆಟ್ಟಗುಡ್ಡಗಳು ಕಾವಲು ಪಡೆಯಂತೆ ರಕ್ಷಣೆಗೆಂದೇ ಇವೆ. ಪ್ರಕೃತಿಯ ವರದಾನವಾಗಿರುವ ಇವುಗಳನ್ನು ಉಳಿಸಿಕೊಳ್ಳುವ ಬದಲು ಐಷಾರಾಮಿ ಜೀವನಕ್ಕಾಗಿ ಎಲ್ಲವನ್ನು ನಾಶಮಾಡಲಾಗುತ್ತಿದೆ. ಈ ಸ್ವಯಂಕೃತ ಅಪರಾಧದಿಂದಲೇ ಜಲಸ್ಫೋಟದಂತಹ ಪ್ರಾಕೃತಿಕ ವಿಕೋಪ ಸಂಭವಿಸಿದೆ ಎಂದು ನೂರುನ್ನಿಸಾ ಹೇಳಿದರು.
ಜೇನುಹುಳುವಿನಂತೆ ಬದುಕಿ
ಮನುಷ್ಯ ಜೇನು ಹುಳುವಿನಂತೆ ಬದುಕಬೇಕು, ಜೇನುಹುಳಗಳು ಯಾವುದೇ ಕೊಳೆತ ವಸ್ತುಗಳ ಮೇಲೆ ಆಕರ್ಷಿತವಾಗದೆ ಕೇವಲ ಒಂದು ಹನಿ ಮಕರಂದಕ್ಕಾಗಿ ಹೂವನ್ನು ಅವಲಂಭಿಸುತ್ತವೆ. ಆದರೆ ಮಕರಂದವನ್ನು ಹೀರುವ ಸಂದರ್ಭ ಎಲ್ಲೂ ಹೂವನ್ನು ನಾಶ ಮಾಡುವುದಿಲ್ಲ, ಬದಲಿಗೆ ಕೇವಲ ಒಂದು ಹನಿ ಜೇನನ್ನು ಸೂಕ್ಷ್ಮವಾಗಿ ಪಡೆದು ಅದನ್ನು ಶೇಖರಣೆ ಮಾಡಿ ಸಮಾಜಕ್ಕೆ ನೀಡುತ್ತದೆ. ಇದೇ ರೀತಿಯಲ್ಲಿ ಮನುಷ್ಯ ಕೂಡ ಪ್ರಕೃತಿಗೆ ಹಾನಿ ಮಾಡದೆ ತನಗೆ ಬೇಕದಷ್ಟನ್ನು ಮಾತ್ರ ಪಡೆದು ಸಮಾಜಕ್ಕೆ ಮರಳಿ ನೀಡಬೇಕೆಂದು ನೂರುನ್ನಿಸ ಕರೆ ನೀಡಿದರು.
ಪ್ರಕೃತಿಯನ್ನು ಕೊಳ್ಳೆ ಹೊಡೆಯಲಾಗಿದೆ
ಪ್ರಾಸ್ತಾವಿಕವಾಗಿ ಮಾತನಾಡಿದ ಜಮಾಅತೇ ಇಸ್ಲಾಮಿ ಹಿಂದ್‌ನ ರಾಜ್ಯ ಕಾರ್ಯದರ್ಶಿ ಅಕ್ಬರಲಿ ಉಡುಪಿ, ಪ್ರಕೃತಿ ವಿಕೋಪ ದೇವರ ಶಿಕ್ಷೆಯಲ್ಲ, ಬದಲಿಗೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ಕೊಳ್ಳೆ ಹೊಡೆದ ಪರಿಣಾಮ ಎಂದು ಅಭಿಪ್ರಾಯಪಟ್ಟರು.
ಮುಂದೆ ಈ ರೀತಿಯ ಅನಾಹುತಗಳು ಸಂಭವಿಸಬಾರದು ಎಂದಾದರೆ ಸರ್ಕಾರ ಪ್ರಕೃತಿಯ ಮೇಲೆ ತನ್ನ ಹಿಡಿತ ಸಾಧಿಸಬೇಕು. ಒಂದು ಮರ ಕಡಿದರೆ ನೂರು ಮರ ಬೆಳೆಸುವ ನಿಯಮ ಜಾರಿಯಾಗಬೇಕು. ಪ್ರಕೃತಿ ನಾಶವಾದರೆ ಯಾರೂ ಉಳಿಯಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟ ಅವರು, ನಮ್ಮ ಸಂಸ್ಥೆಯು ಜನರೊಂದಿಗೆ ಪ್ರೀತಿಯ ಭಾವನೆಯನ್ನು ಬೆಳೆಸಿಕೊಂಡಿರುವುದರಿಂದ ಸಂತ್ರಸ್ತರಿಗಾಗಿ ಮನೆ ನಿರ್ಮಿಸಿಕೊಡುವ ಕಾರ್ಯವನ್ನು ಸಾಕಾರಗೊಳಿಸುತ್ತಿದೆ ಎಂದರು.
ಬಂಡವಾಳಶಾಹಿಗಳ ಹಿಡಿತದಲ್ಲಿ ಪ್ರಕೃತಿ
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ಸ್ವಾರ್ಥಕ್ಕಾಗಿ ಮನುಷ್ಯ ಸೃಷ್ಟಿಸಿದ ಪ್ರಾಕೃತಿಕ ಅಸಮತೋಲನವೇ ಅನಾಹುತಗಳಿಗೆ ಕಾರಣವೆಂದು ಅಭಿಪ್ರಾಯಪಟ್ಟರು. ಹಿಂದಿನ ವರ್ಷಗಳಲ್ಲಿ ಇದಕ್ಕಿಂತಲೂ ಹೆಚ್ಚಿನ ಮಳೆಯಾಗುತ್ತಿತ್ತಾದರೂ ವಿಕೋಪ ಸಂಭವಿಸುತ್ತಿರಲಿಲ್ಲ. ಆದರೆ ಇಂದು ಪ್ರಕೃತಿಯ ಮೇಲಿನ ಅತ್ಯಾಚಾರದಿಂದಾಗಿ ಪ್ರಾಕೃತಿ ದುರ್ಘಟನೆಗಳು ನಡೆಯುತ್ತಿದೆ ಎಂದರು.
ಪ್ರಕೃತಿ ಮತ್ತು ಸಮಾಜ ಬಂಡವಾಳಶಾಹಿಗಳ ಹಿಡಿತದಲ್ಲಿದ್ದು, ಇದೇ ಕಾರಣಕ್ಕೆ ಇಂದು ಅಶಾಂತಿ, ಅಸಹನೆ, ಅನಾಹುತಗಳು ಎದುರಾಗುತ್ತಿವೆ ಎಂದು ತಿಳಿಸಿದರು. ಬಂಡವಾಳಶಾಹಿಗಳ ವಿರುದ್ಧ ಜನ ಮೊದಲು ಜಾಗೃತರಾಗಬೇಕಾಗಿದೆ. ವಿಭಜನೆಯ ಕಾಲದಲ್ಲಿ ವಿಪತ್ತುಗಳು ಸಂಭವಿಸುತ್ತಿವೆ ಎಂದು ಅಭಿಪ್ರಾಯಪಟ್ಟ ಮುಹಮ್ಮದ್ ಕುಂಞÂ ಯಾವುದೇ ಜಾತಿ ಧರ್ಮ ನೋಡಿ ಪ್ರಕೃತಿ ವಿಕೋಪಗಳು ಸಂಭವಿಸುವುದಿಲ್ಲ ಎಂದರು.
ಮನೆ ಹಸ್ತಾಂತರ
ಸಮಾರಂಭದಲ್ಲಿ ಮಡಿಕೇರಿಯ ಅಶ್ರಫ್, ಅಫ್ಸರ, ತಾಳತ್ತಮನೆಯ ವಿಜಯ, ಮಡಿಕೇರಿ ರಾಣಿಪೇಟೆಯ ರಝಿಯ, ಗದ್ದಿಗೆ ಸಮೀಪದ ಸಮೀನ, ಸುಂಟಿಕೊಪ್ಪದ ಎಂ.ಎ.ಚೋದಮ್ಮ, ಮಡಿಕೇರಿ ಗಣಪತಿ ಬೀದಿಯ ಮಕ್ಬೂಲ್, ಜಲಾಶಯ ಬಡಾವಣೆಯ ಜೋಸ್ಟಿನ್ ಡಿಸೋಜ ಅವರುಗಳಿಗೆ ಮನೆಗಳ ಕೀ ಯನ್ನು ಹಸ್ತಾಂತರಿಸಲಾಯಿತು.
ಕರ್ನಾಟಕ ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ ನಿರ್ದೇಶಕ ಕೆ.ಎಂ.ಅಶ್ರಫ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.