ಕಾಸರಗೋಡು: ಯುವಕನನ್ನು ಕೊಲೆಗೈದು ಬಾವಿಗೆಸೆದ ಘಟನೆಗೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಧೂರು ಪಟ್ಲ ದ ಶಾನ್ ವಾಜ್ (27) ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊಗ್ರಾಲ್ ಕೆ.ಕೆ. ಪುರ ಚಲಿಯಾಂಗೋಡಿನ ಮುನವ್ವರ್ ಕಾಸಿಂ(25), ನೆಲ್ಲಿಕುಂಜೆ ಶಾಂತಿನಗರದ ಕೆ. ಜಯಚಂದ್ರ(43) ನನ್ನು ಬಂಧಿಸಲಾಗಿದೆ. ಗಾಂಜಾ ವಹಿವಾಟಿನ ಕುರಿತ ದ್ವೇಷ ಕೃತ್ಯಕ್ಕೆ ಕಾರಣ ಎಂದು ತನಿಖೆಯಿಂದ ತಿಳಿದುಬಂದಿದೆ.
ಪ್ರಕರಣದ ಇನ್ನೋರ್ವ ಆರೋಪಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ .
ಅಕ್ಟೋಬರ್ 20ರಂದು ಕಾಸರಗೋಡು ನಗರದ ದಿನೇಶ್ ಬೀಡಿ ಕಂಪೆನಿ ಪರಿಸರದ ಪಾಲು ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶಾನ್ ವಾಜ್ ನ ಮೃತದೇಹ ಪತ್ತೆಯಾಗಿತ್ತು. ಬಾವಿ ಸಮೀಪ ಶಾನ್ ವಾಜ್ ನ ಕೂಲಿಂಗ್ ಗ್ಲಾಸ್ , ಚೈನ್ ತುಂಡಾದ ಸ್ಥಿತಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಕೊಲೆಗೈದು ಬಾವಿಗೆಸೆದ ಬಗ್ಗೆ ಪೊಲೀಸರು ಆರಂಭದಲ್ಲಿ ಸಂಶಯ ವ್ಯಕ್ತಪಡಿಸಿದ್ದರು. ಹೊಟ್ಟೆಯ ಕೆಳಗಡೆ ಆಳವಾದ ಗಾಯ ಪತ್ತೆಯಾಗಿತ್ತು. ಪೊಲೀಸರು ಶಾನ್ ವಾಜ್ ನ ಸ್ನೇಹಿತರನ್ನು ವಿಚಾರಣೆಗೊಳಪಡಿಸಿದ್ದರು. ಶಾನ್ ವಾಜ್ ನ ಮೊಬೈಲ್ ನ್ನು ಕೇಂದ್ರೀಕರಿಸಿ ತನಿಖೆ ನಡೆಸಿದ ಪೊಲೀಸರಿಗೆ ಆರೋಪಿಗಳ ಸುಳಿವು ಲಭಿಸಿತ್ತು.
ಗಾಂಜಾ ವಹಿವಾಟಿನ ಕಮಿಷನ್ ಕುರಿತ ವಿವಾದ ಕೊಲೆಗೆ ಕಾರಣ ಎಂದು ತನಿಖೆಯಿಂದ ತಿಳಿದುಬಂದಿದೆ.