ಬೇಲೂರು: ಶಾಲೆಗೆ ತೆರಳುತ್ತಿದ್ದ ಶಾಲಾ ಮಕ್ಕಳಿಬ್ಬರನ್ನು ಅಪಹರಿಸಿ ನಂತರ ಬಿಟ್ಟುಹೋಗಿರುವ ಘಟನೆ ಬುಧವಾರ ಬೆಳಿಗ್ಗೆ ಪಟ್ಟಣದ ಮೂಡಿಗೆರೆ ರಸ್ತೆಯ ಜೆಪಿ.ನಗರದಲ್ಲಿ ನಡೆದಿದ್ದು, ಈ ಘಟನೆಯಿಂದ ಪೋಷಕರು ಆತಂಕಗೊಂಡಿದ್ದಾರೆ.
ಜೆಪಿ.ನಗರದ ಮುಖ್ಯರಸ್ತೆಯಲ್ಲಿರುವ ಮೌಂಟ್‌ಕಾರ್ಮಲ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ತಾಲೂಕಿನ ಬಂಟೇನಹಳ್ಳಿ ಗ್ರಾಮದ ಸುರೇಶ್ ಎಂಬುವರ ಮಕ್ಕಳಾದ 13 ವರ್ಷದ ಪಾವನ ಮತ್ತು ಈಕೆಯ ಸಹೋದರ 4 ವರ್ಷದ ನೂತನ ಅಪಹರಣಕ್ಕೊಳಗಾದ ವಿದ್ಯಾರ್ಥಿಗಳು.
ಘಟನೆಗೆ ಸಂಬಂಧಿಸಿದಂತೆ ಅಪಹರಣಕ್ಕೊಳಗಾದ ವಿದ್ಯಾರ್ಥಿನಿ ಪಾವನ ಮಾತನಾಡಿ, ಬಂಟೇನಹಳ್ಳಿಯಿಂದ ವಾಹನದಲ್ಲಿ ಬೆಳಗ್ಗೆ 8 ಗಂಟೆಗೆ ಶಾಲೆಗೆ ತೆರಳುತ್ತಿದ್ದೆವು. ಶಾಲೆಗೆ ಹೋಗುವ ಮುನ್ನ ಶಾಲೆಯ ಮುಂಭಾಗವಿರುವ ಅಂಗಡಿಯಲ್ಲಿ ಬರೆಯುವ ಹಾಳೆಯನ್ನು ತೆಗೆದುಕೊಂಡು ವಾಪಸ್ ಶಾಲೆಗೆ ಬರುವಾಗ ರಸ್ತೆಯ ಪಕ್ಕದಲ್ಲೆ ನಿಂತಿದ್ದ ಕಾರಿನಿಂದ ಇಳಿದ ಇಬ್ಬರು ನಮ್ಮನ್ನು ಎಳೆದು ಕಾರಿನೊಳಗೆ ಕೂರಿಸಿಕೊಂಡು ಮೂಡಿಗೆರೆ ರಸ್ತೆಯತ್ತ ತೆರಳಿದರು.
ಕಾರಿನೊಳಗೆ ನಾವು ಕೂಗಿಕೊಂಡೆವು. ಆಗ ಕಾರಿನಲ್ಲಿದ್ದವರು ನಮಗೆ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಇನ್ನೊಂದು ದಿನ ನಿನ್ನನ್ನು ಸಾಯಿಸುತ್ತೇನೆ ಎಂದು ಹೆದರಿಸಿ ನಮ್ಮನ್ನು ಕಾರಿಗೆ ಕೂರಿಸಿಕೊಂಡ ಸ್ವಲ್ಪ ದೂರದಲ್ಲಿರುವ ಪೆಟ್ರೋಲ್ ಬಂಕ್ ಸಮೀಪ ಕಾರಿನಿಂದ ತಳ್ಳಿ ತೆರಳಿದರು. ಕಾರಿನಲ್ಲಿ 4 ಜನರಿದ್ದರು ಎಂದು ಮಾಹಿತಿ ನೀಡಿದ್ದಾಳೆ.
ಇದೇ ವೇಳೆ ಮೌಂಟ್ ಕಾರ್ಮೆಲ್ ಶಾಲೆಗೆ ತಮ್ಮ ಮಗನನ್ನು ಬಿಟ್ಟುಹೋಗಲು ಬಂದಿದ್ದ ಪೊಲೀಸ್ ಹೆಡ್‌ಕಾನ್ಸ್ಟೇಬಲ್ ತಾಂಡವೇಶ್ವರ್, ಜನ ಗುಂಪು ಸೇರಿರುವುದನ್ನು ಕಂಡು ವಿಚಾರಿಸಿದ್ದಾರೆ. ವಿಷಯ ತಿಳಿದು ಅಪಹರಿಸಿದ ಸಮೀಪದಲ್ಲೆ ಇರುವ ಸರಕಾರಿ ವಿದ್ಯಾರ್ಥಿ ನಿಲಯದ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದಾಗ ಸಿಲ್ವರ್ ಬಣ್ಣದ ಶಿಫ್ಟ್ ಕಾರಿನಲ್ಲಿ ಮಕ್ಕಳನ್ನು ಅಪಹರಿಸಿರುವುದು ಸಾಬೀತಾಗಿದೆ. ಪೆಟ್ರೋಲ್ ಬಂಕ್ ಬಳಿ ಇರುವ ಶೀಬಾ ಮಾರ್ಕೆಟ್ ಬಳಿ ಮಕ್ಕಳನ್ನು ಕಾರಿನಿಂದ ತಳ್ಳಿ ಹೋಗಿದ್ದನ್ನು ಸಮೀಪದಲ್ಲಿರುವ ಕಾರು ಸರ್ವೀಸ್ ಸ್ಟೇಷನ್ ನೌಕರರೊಬ್ಬರು ಖಾತ್ರಿ ಪಡಿಸಿದ್ದಾರೆ. ವಿಷಯ ತಿಳಿದು ಮೌಂಟ್‌ಕಾರ್ಮೆಲ್ ಶಾಲೆಯ ಫಾದರ್ ಆಗಮಿಸಿ ವಿಚಾರಿಸಿದ್ದಾರೆ. ಈ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಪಹರಣಕ್ಕೊಳಗಾಗಿ ವಾಪಸ್ ಬಂದ ವಿದ್ಯಾರ್ಥಿಗಳು ಶಾಲೆಯಿಂದ 4 ಕಿ.ಮೀ.ದೂರದಲ್ಲಿರುವ ಬಂಟೇನಹಳ್ಳಿ ಗ್ರಾಮದವರಾಗಿದ್ದು, ಇವರ ತಂದೆ ಸುರೇಶ್ ಕೃಷಿಕರಾಗಿದ್ದು ಇವರ ವಿರೋಧಿಗಳು ಯಾರಾದರೂ ಬೆದರಿಕೆವೊಡ್ಡಲು ಈ ರೀತಿ ಅಪಹರಣದ ನಾಟಕ ಆಡಿದ್ದಾರೆಯೆ ಎಂಬ ಬಗ್ಗೆ ಮಾತು ಕೇಳಿಬರುತ್ತಿದ್ದು, ಪೊಲೀಸರ ತನಿಖೆಯಿಂದ ಮಾತ್ರ ನೈಜಾಂಶ ಹೊರ ಬರಬೇಕಿದೆ.