ಮಡಿಕೇರಿ: ಮಳೆಹಾನಿ ಪರಿಹಾರದ ಕಾಮಗಾರಿಗಳಿಗಾಗಿ ನೀಡಲಾದ ೨೧ ಕೋಟಿ ರೂ.ಗಳನ್ನು ಕಾನೂನಿಗೆ ವಿರುದ್ಧವಾಗಿ ಖಾಸಗಿ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದ ಜಿ.ಪಂ ಕಾರ್ಯಪಾಲಕ ಇಂಜಿನಿಯರ್ ಶ್ರೀಕಂಠಯ್ಯ ಅವರ ವಿರುದ್ಧದ ಆರೋಪ ಸಾಬೀತಾಗಿರುವುದರಿಂದ ಈ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಸಂಕಷ್ಟದಲ್ಲಿರುವ ಸಂತ್ರಸ್ತರ ನೋವಿಗೆ ಸ್ಪಂದಿಸಬೇಕಾದ ಅಧಿಕಾರಿಗಳು ಪರಿಹಾರ ಕಾರ್ಯಗಳಿಗಾಗಿ ಬಂದ ಅನುದಾನವನ್ನು ಈ ರೀತಿ ನಿಯಮ ಬಾಹಿರವಾಗಿ ಠೇವಣಿ ಇರಿಸಿ ಅನ್ಯಾಯ ಮಾಡಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.
ಜಿ.ಪಂ ಸದಸ್ಯರೊಬ್ಬರು ಕಳೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾರಣ ಈ ಪ್ರಕರಣ ಬೆಳಕಿಗೆ ಬಂದಿದೆ. ದಕ್ಷ ಅಧಿಕಾರಿಯಾಗಿರುವ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಪ್ರಿಯ ಅವರ ನಿರ್ದೇಶನದಂತೆ ಶ್ರೀಕಂಠಯ್ಯ ಅವರ ವಿರುದ್ಧದ ತನಿಖೆ ಚುರುಕುಗೊಂಡು ಇದೀಗ ಆರೋಪ ಸಾಬೀತಾಗಿದೆ. ಸರ್ಕಾರದ ಬರೋಬರಿ ೨೧ ಕೋಟಿ ರೂ.ಗಳನ್ನು ಯಾವುದೇ ಆತಂಕವಿಲ್ಲದೆ, ಮೇಲಾಧಿಕಾರಿಗಳ ಆದೇಶವಿಲ್ಲದೆ ಸ್ವ-ಇಚ್ಛೆಯಿಂದ ಖಾಸಗಿ ಬ್ಯಾಂಕ್‌ನಲ್ಲಿಟ್ಟಿರುವುದನ್ನು ಗಮನಿಸಿದರೆ ಈ ಪ್ರಕರಣದ ಹಿಂದೆ ದೊಡ್ಡ ಮಟ್ಟದ ಹಸ್ತಕ್ಷೇಪವಿದೆ ಎನ್ನುವುದು ತಿಳಿದು ಬರುತ್ತಿದೆ. ಅಲ್ಲದೆ ಶ್ರೀಕಂಠಯ್ಯ ಅವರಿಗೆ ಹಿರಿಯ ರಾಜಕಾರಣಿಯೊಬ್ಬರ ಕೃಪಾ ಕಟಾಕ್ಷವೂ ಇರುವ ಬಗ್ಗೆ ಸಂಶಯವಿದೆ ಎಂದು ಕೆ.ಎಂ.ಗಣೇಶ್ ಆರೋಪಿಸಿದ್ದಾರೆ.
ಶ್ರೀಕಂಠಯ್ಯ ಅವರನ್ನು ಅಮಾನತುಗೊಳಿಸಿರುವ ಕುರಿತು ಮಾಹಿತಿ ಇದೆ, ಆದರೆ ಈ ಕ್ರಮ ಜನರ ಕಣ್ಣಿಗೆ ಮಣ್ಣೆರೆಚುವ ತಂತ್ರವಾಗಬಾರದು. ಬದಲಿಗೆ ಉನ್ನತ ಮಟ್ಟದ ತನಿಖೆ ನಡೆಸಿ ಕಾರ್ಯಪಾಲಕ ಇಂಜಿನಿಯರ್ ಈ ಹಿಂದೆಯೂ ಮಾಡಿರಬಹುದಾದ ಅಕ್ರಮಗಳನ್ನು ಬಯಲಿಗೆಳೆಯಬೇಕು ಮತ್ತು ಯಾವುದೇ ಕಾರಣಕ್ಕೂ ಮರಳಿ ಹುದ್ದೆಯನ್ನು ನೀಡಬಾರದೆಂದು ಅವರು ಒತ್ತಾಯಿಸಿದ್ದಾರೆ.