ಈಗಾಗಲೇ ರಷ್ಯಾದ ಅತಿ ಎತ್ತರದ ಮೌಂಟ್ ಎಲ್‌ಬ್ರಸ್ ಪರ್ವತದ ಮೇಲೆ ಭಾರತದ ರಾಷ್ಟ್ರಧ್ವಜವನ್ನು ನೆಟ್ಟು ಬಂದಿರುವ ಭವಾನಿ ಇದೀಗ ನ್ಯೂಜಿಲ್ಯಾಂಡ್‌ನ ಮೌಂಟ್ ರೂಪೇವ್‌ನಲ್ಲಿ ತರಬೇತಿ ಪಡೆದ ಮೊದಲ ಭಾರತದ ಯುವತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಕೊಡಗಿನ ನಾಪೋಕ್ಲು ಸಮೀಪದ ಪೆರೂರು ಗ್ರಾಮದ ತೆಕ್ಕಡ ನಂಜುಂಡ (ಶಂಭು), ಪಾರ್ವತಿ(ದಿವ್ಯ) ದಂಪತಿ ಪುತ್ರಿ ಭವಾನಿ ಶಾಲಾ ದಿನಗಳಲ್ಲಿಯೇ ಕ್ರೀಡೆ, ಎನ್‌ಸಿಸಿಯತ್ತ ಹೆಚ್ಚಿನ ಒಲವು ಹೊಂದಿದ್ದರು. ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುವಾಗ ಎನ್‌ಸಿಸಿಗೆ ಸೇರ್ಪಡೆಗೊಂಡ ಬಳಿಕ ಸಾಹಸಮಯ ಚಟುವಟಿಕೆಯತ್ತ ತನ್ನನ್ನು ತೊಡಗಿಸಿಕೊಳ್ಳಲು ಇನ್ನಷ್ಟು ಹಾದಿ ಸುಗಮವಾಯಿತು.
ಹಿಮಚ್ಛಾದಿತ ಪರ್ವತ ಏರುವುದು, ಈಜು, ಕುದುರೆ ಸವಾರಿ ಹೀಗೆ ಹಲವು ಸಾಹಸಮಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಟಿ.ಎನ್.ಭವಾನಿ ಇದೀಗ ನ್ಯೂಜಿಲ್ಯಾಂಡ್‌ನ ಜ್ವಾಲಾಮುಖಿ ಪರ್ವತವಾಗಿರುವ ಮೌಂಟ್ ರೂಪೇವ್‌ನಲ್ಲಿ ಮೂರು ತಿಂಗಳ ಕಾಲ ಸ್ಕೀಯಿಂಗ್ ತರಬೇತಿ ಮುಗಿಸಿ ಅಂತರಾಷ್ಟಿçÃಯ ಸ್ಕೀಯಿಂಗ್ ಬೋಧಕರ ಅರ್ಹತೆಯನ್ನು ಪಡೆದುಕೊಂಡಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ತರಬೇತಿಗೆ ದಕ್ಷಿಣಕೊರಿಯಾಗೆ ತೆರಳುವ ಅವಕಾಶವನ್ನು ಪಡೆದುಕೊಂಡಿದ್ದಾರೆ.
ಹಾಗೆ ನೋಡಿದರೆ ಮೌಂಟ್ ರೂಪೇವ್ ಜ್ವಾಲಾಮುಖಿ ಪರ್ವತವಾಗಿದ್ದು, ಈ ಹಿಂದೆ ಇಲ್ಲಿ ಜ್ವಾಲಾಮುಖಿ ಕಾಣಿಸಿಕೊಂಡಿತ್ತಲ್ಲದೆ. ಯಾವಾಗ ಬೇಕಾದರೂ ಜ್ವಾಲಾಮುಖಿ ಉಕ್ಕಬಹುದು. ಇಂತಹ ಪರ್ವತಗಳಲ್ಲಿ ಸ್ಕೀಯಿಂಗ್ ತರಬೇತಿ ಪಡೆಯುವುದು ಅಷ್ಟು ಸುಲಭವಲ್ಲ. ಆದರೆ ಭವಾನಿ ಜುಲೈನಿಂದ ಸೆಪ್ಟಂಬರ್ ತನಕ ಮೂರು ತಿಂಗಳ ಕಾಲದ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿ ಬಂದಿದ್ದಾರೆ.
ಭವಾನಿ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ದಕ್ಷಿಣಕೊಡಗಿನ ಶ್ರೀಮಂಗಲದ ಜೆಸಿ ಶಾಲೆಯಲ್ಲಿ, ಬಳಿಕ ಮಡಿಕೇರಿ ತಾಲೂಕಿನ ಗಾಳಿ ಬೀಡುವಿನ ಜವಾಹರ ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿ, ಮಂಗಳೂರಿನ ಸೆಂಟ್ ಅ್ಯಗ್ನೇಸ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಡಾರ್ಜಲಿಂಗ್‌ನ ಹಿಮಾಲಯ ಮೌಂಟೇನಿಯರಿಂಗ್ ಇನ್ಸಿಟ್ಯೂಟ್‌ನಲ್ಲಿ ಬೋಧಕರಾಗಿಯೂ ಕೆಲಸ ಮಾಡಿದ್ದಾರೆ.
ಪ್ರೌಢಶಾಲೆಯಿಂದಲೇ ಎನ್‌ಸಿಸಿಗೆ ಸೇರಿ ಕಾಲೇಜಿನಲ್ಲಿಯೂ ಅದನ್ನು ಮುಂದುವರೆಸಿ ವಿವಿಧ ಕ್ಯಾಂಪ್‌ಗಳಲ್ಲಿ ಭಾಗವಹಿಸಿ ತರಭೇತಿ ಪಡೆದು ೨೦೧೬ರಲ್ಲಿ ನವದೆಹಲಿಯ ರಾಜಪಥ್‌ನಲ್ಲಿ ನಡೆದ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಭಾಗವಹಿಸಿ ಗಮನಸೆಳೆದಿದ್ದಾರೆ.
ಇನ್ನು ಜೋದ್‌ಫುರ್‌ನಲ್ಲಿ ನಡೆದ ವಾಯುದಳದ ಅಖಿಲ ಭಾರತ ವಾಯು ಸೈನಿಕ್ ಶಿಬಿರದಲ್ಲೂ ಪಾಲ್ಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ, ಎನ್‌ಸಿಸಿಯ ಡೈರೆಕ್ಟರ್ ಜನರಲ್ ಲೆ.ಜ. ಅನಿರುದ್ಧ ಚಕ್ರವರ್ತಿ, ಕರ್ನಾಟಕ, ಗೋವಾ ಎನ್‌ಸಿಸಿ ಡೆಪ್ಯೂಟಿ ಡೈರೆಕ್ಟರ್ ಜನರಲ್ ಏರ್ ಕಮಾಂಡರ್ ಸಿ.ರಾಜೀವ್ ಅವರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಪರ್ವಾತಾರೋಹಣದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಭವಾನಿ ಅವರು, ಪ್ರಾಥಮಿಕ ತರಬೇತಿಯನ್ನು ಮನಾಲಿಯ ಅಟಲ್ ಬಿಹಾರಿ ವಾಜಪೇಯಿ ಇನ್ಸ್ಟ್ಯೂಟ್ ಆಫ್ ಮೌಂಟೇನರಿAಗ್ ಆಲೈಡ್ ಸ್ಪೋರ್ಟ್ಸ್(ಎಬಿವಿಐಎಂಎಎಸ್)ನಲ್ಲಿ ಮತ್ತು ಹೆಚ್ಚಿನ ತರಬೇತಿಯನ್ನು ಡಾರ್ಜಲಿಂಗ್‌ನ ಹಿಮಾಲಯ ಮೌಂಟೇನಿಯರಿAಗ್ ಇನ್ಸಿಟ್ಯೂಟ್(ಹೆಚ್‌ಎಂಐ)ನಲ್ಲಿ ಪಡೆದಿದ್ದಾರೆ.
ಹಿಮಾಲಯ ಮೌಂಟೇನಿಯರಿAಗ್ ಇನ್ಸಿಟ್ಯೂಟ್‌ನಿಂದ ಈಗಾಗಲೇ ಹಿಮಾಲಯ ಪರ್ವತ ಸೇರಿದಂತೆ ಹಲವು ಕಠಿಣ ಪರ್ವತಗಳಲ್ಲಿ ಪರ್ವತಾರೋಹಣ ನಡೆಸಿದ್ದು, ಈ ಪೈಕಿ ಅತ್ಯಂತ ಕಠಿಣವಾಗಿರುವ ಪ್ರಥಮ ದರ್ಜೆಯ ತರಬೇತಿಯನ್ನು ಯಶಸ್ವಿಯಾಗಿ ಮುಗಿಸುವ ಮೂಲಕ ಇಂತಹ ತರಬೇತಿಯನ್ನು ಪೂರೈಸಿದ ಏಕೈಕ ಯುವತಿ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಈಗಾಗಲೇ ಉತ್ತರಾಖಾಂಡ್‌ನ ರುಡುಗೈರ್, ಮನಾಲಿಯ ಫ್ರೆಂಡ್‌ಶಿಪ್, ಸಿಕ್ಕಿಂನ ರೆನಾಕ್, ಲೇಹ್‌ನ ಸ್ಟಾಕ್ ಕಂಗ್ರಿಯಲ್ಲಿ ಮಂಜುಗಡ್ಡೆ ಹೊದಿಕೆಯ ಪರ್ವತಗಳನ್ನೇರಿ ಯಶಸ್ಸು ಸಾಧಿಸಿದ್ದು ಈಜು, ಕುದುರೆ ಸವಾರಿ, ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ತರಬೇತಿಗಳನ್ನು ಪಡೆದಿದ್ದಾರೆ.
ಕಳೆದ ವರ್ಷ(೨೦೧೮) ಯೂರೋಪ್ ದೇಶಗಳ ಪೈಕಿ ಅತಿ ಎತ್ತರದ ರಷ್ಯಾದ ಹಿಮಚ್ಚಾದಿತ ಪರ್ವತ ಎಲ್‌ಬ್ರಸ್‌ನ್ನು ನಿರಂತರವಾಗಿ ಸುಮಾರು ೮ ಗಂಟೆಗಳ ಕಾಲ ಏರಿ ತುತ್ತ ತುದಿಯಲ್ಲಿ ಭಾರತದ ಬಾವುಟವನ್ನು ಹಾರಿಸಿ ಬಂದಿದ್ದಾರೆ. ನಾಲ್ಕು ದೇಶಗಳ ನಾಲ್ವರು ಪರ್ವತಾರೋಹಿಗಳ ಪೈಕಿ ಪರ್ವತದ ತುತ್ತ ತುದಿ ತಲುಪಿದ ಮೊದಲಾಕೆಯಾಗಿದ್ದಾರೆ.
ಪರ್ವತಾರೋಹಣ ಬಳಿಕ ಸ್ಕೀಯಿಂಗ್‌ನಲ್ಲಿ ಸಾಧನೆ ಮಾಡಬೇಕೆಂಬ ಹಂಬಲದಿಂದ ಭಾರತದ ಗುಲ್ಮಾರ್ಗ್ ಮತ್ತು ಕಾಶ್ಮೀರದಲ್ಲಿ ತರಬೇತಿ ಪಡೆದಿದ್ದು, ಹೆಚ್ಚಿನ ತರಬೇತಿಯನ್ನು ನ್ಯೂಜಿಲ್ಯಾಂಡ್‌ನ ಮೌಂಟ್ ರೂಪೇವ್‌ನಲ್ಲಿ ಪಡೆದು ಬಂದಿದ್ದಾರೆ. ಮುಂದಿನ ದಿನಗಳಲ್ಲಿ ದಕ್ಷಿಣ ಕೊರಿಯಾದಲ್ಲಿ ಇನ್ನಷ್ಟು ತರಬೇತಿ ಪಡೆಯಲು ಅವಕಾಶ ಒದಗಿ ಬಂದಿದೆ. ಆದರೆ ಇದಕ್ಕೆ ಹೆಚ್ಚಿನ ಆರ್ಥಿಕ ನೆರವಿನ ಅಗತ್ಯತೆಯಿದ್ದು, ಸಂಘ ಸಂಸ್ಥೆಗಳ ಮತ್ತು ದಾನಿಗಳ ಸಹಕಾರವನ್ನು ಬಯಸಿದ್ದಾರೆ. ಜತೆಗೆ ಇದುವರೆಗಿನ ಇವರ ಸಾಧನೆಗೆ ಸಹಾಯ ಮಾಡಿದ ದಾನಿಗಳಾದ ರೊನಾಲ್ಡ್ ಕೊಲ್ಯಾಕೋ, ನಟ ಗೋಲ್ಡನ್ ಸ್ಟಾರ್ ಗಣೇಶ್, ವಿರಾಜಪೇಟೆ ಕೊಡವ ಸಮಾಜವನ್ನು ಸ್ಮರಿಸುತ್ತಾರೆ.