ಮಡಿಕೇರಿ: ಮುಂದಿನ ಕೆಲವೇ ದಿನಗಳಲ್ಲಿ ಸುಪ್ರಿಂ ಕೋರ್ಟ್‍ನಿಂದ ಹೊರ ಬೀಳಲಿರುವ ಅಯೋಧ್ಯೆ ತೀರ್ಪು, ಟಿಪ್ಪು ಜಯಂತಿ ಆಚರಣೆಯ ಪರ-ವಿರೋಧ ಅಭಿಪ್ರಾಯ, ಈದ್ ಮಿಲಾದ್ ಆಚರಣೆ, ಈ ಸಂದರ್ಭಗಳಲ್ಲಿ ಶಾಂತಿ ಕಾಪಾಡಿಕೊಳ್ಳವಂತೆ ಸರಕಾರ ನೀಡಿದ ಆದೇಶವನ್ನು ಪಾಲಿಸಲು ಸಜ್ಜಾಗಿರುವ ಕೊಡಗು ಜಿಲ್ಲಾ ಪೊಲೀಸರು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಇಂದು ಮಡಿಕೇರಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಗಲಭೆಕೋರರನ್ನು ನಿಯಂತ್ರಿಸಿ, ಸಾರ್ವಜನಿಕ ಶಾಂತಿ ಕಾಪಾಡುವ ಕುರಿತು ಅಣುಕು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಹಿಂದೆ ಜಿಲ್ಲೆಯಲ್ಲಿ ನಡೆದಿದ್ದ ಗಲಭೆಗಳನ್ನು ಹತ್ತಿಕ್ಕುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾದ ಹಿನ್ನೆಲೆಯನ್ನು ಮುಂದಿಟ್ಟುಕೊಂಡು ಅಣುಕು ಪ್ರದರ್ಶನವನ್ನು ನಡೆಸಲಾಯಿತು. ಒಂದು ಗುಂಪು ಪೊಲೀಸ್ ಸೂಚನೆಯನ್ನು ಧಿಕ್ಕರಿಸಿ ಕಾನೂನು ಉಲ್ಲಂಘನೆ ನಡೆಸುವ ಮೂಲಕ ಸಾರ್ವಜನಿಕ ಶಾಂತಿಯನ್ನು ಭಂಗಪಡಿಸಲು ಮುಂದಾದಾಗ ಅವರನ್ನು ಯಾವ ರೀತಿ ಹೆಡೆಮುರಿ ಕಟ್ಟಲಾಗುತ್ತದೆ, ಪೊಲೀಸರ ಕೊನೆಯ ಅಸ್ತ್ರ ಹೇಗಿರಲಿದೆ, ಯಾವ ರೀತಿಯ ತಂತ್ರಗಳನ್ನು ಅನುಸರಿಸಲಾಗುತ್ತದೆ ಎಂದು ಅಣುಕು ಪ್ರದರ್ಶನದ ಮೂಲಕ ಸಾರ್ವಜನಿಕ ಶಾಂತಿ ಮತ್ತು ಪೊಲೀಸ್ ಸೂಚನೆಯನ್ನು ಉಲ್ಲಂಘಿಸುವವರಿಗೆ ಸ್ಪಷ್ಟ ಸಂದೇಶ ರವಾನಿಸಲಾಯಿತು.
ಸ್ಮೋಕ್ ಫ್ಯಾಘ್‍ನ ಎಚ್ಚರಿಕೆ, ಅಶ್ರುವಾಯು ಮೂಲಕ ಗುಂಪು ಚದುರಿಸುವ ಪ್ರಯತ್ನ ಅದೂ ಫಲಪ್ರದವಾಗದಾಗ ಲಾಠಿ ಚಾರ್ಜ್ ಪ್ರಯೋಗ, ಇದಕ್ಕೂ ಬಗ್ಗದಿದ್ದಲ್ಲಿ ಕೊನೆಯ ಅಸ್ತ್ರ ಎಂಬಂತೆ ಮೊಣಕಾಲ ಕೆಳಗೆ ಗುಂಡು ಹೊಡೆಯುವ ಮೂಲಕ ಗಲಭೆಕೋರರನ್ನು ಹತ್ತಿಕ್ಕಲು ಪೊಲೀಸ್ ಇಲಾಖೆ ಸಮರ್ಥವಾಗಿದೆ ಎಂದು ಸಾರ್ವಜನಿಕರಿಗೆ ಅಭಯದ ಸಂದೇಶ ರವಾನಿಸಲಾಯಿತು.
ಕೊಡಗು ಜಿಲ್ಲಾ ವಿಶೇಷ ಸ್ಟ್ರೈಕ್ ಟೀಂ ಲಾಠಿ ಚಾರ್ಜ್ ನಡೆಸುವ ಅಣುಕು ಪ್ರದರ್ಶನ ಮಾಡಿದರೆ, ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಗಲಭೆಕೋರರ ಗುಂಪು ಎಂಬಂತೆ ಅಣುಕು ಪ್ರದರ್ಶನ ನೀಡಿತು. ಜಿಲ್ಲೆಯ ವಿವಿಧ ತಾಲೂಕು ಠಾಣೆಗಳ ಡಿವೈಎಸ್‍ಪಿಗಳು, ವೃತ್ತ ನಿರೀಕ್ಷರು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅಣುಕು ಪೊಲೀಸ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.