ಕೆ.ಆರ್.ಪೇಟೆ: ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಮೈಷುಗರ್ ಹಾಗೂ ಪಾಂಡವಪುರ ಸಕ್ಕರೆ ಕಾರ್ಖಾನೆಗಳನ್ನು ಪುನಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಅವರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ(ಶತಮಾನದ ಶಾಲೆ) ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಡ್ಯ, ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಮಂಡ್ಯ ಮೈಸೂರು ಮತ್ತು ಬೆಂಗಳೂರು, ಕಿದ್ವಾಯಿ ಆಸ್ಪತ್ರೆ ಬೆಂಗಳೂರು, ಸರ್ಕಾರಿ ದಂತ ವೈದ್ಯ ಕಾಲೇಜು ಬೆಂಗಳೂರು, ಜೆ.ಎಸ್.ಎಸ್ ದಂತ ವೈದ್ಯ ಕಾಲೇಜು ಮೈಸೂರು, ಶ್ರೀ ಜಯದೇವ ಹೃದ್ರೋಗಗಳ ಆಸ್ಪತ್ರೆ, ಮೈಸೂರು ಹಾಗೂ ನ್ಯಾಷನಲ್ ಓರಲ್ ಹೆಲ್ತ್ ಪಾಲಿಸಿ ಘಟಕ ಮಂಡ್ಯ ಇವರ ಸಹಯೋಗದಲ್ಲಿ ಉಚಿತ ಬೃಹತ್ ಆರೋಗ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ನನಗೆ ಜನ್ಮ ನೀಡಿದ ಕೆ.ಆರ್.ಪೇಟೆ ತಾಲೂಕಿನ ಋಣ ನನ್ನ ಮೇಲಿದೆ ಹಾಗಾಗಿ ತಾಲೂಕಿನ ಸಮಗ್ರ ಅಭಿವೃದ್ದಿಗೆ ಕ್ಷೇತ್ರದ ಮಾಜಿ ಶಾಸಕ ಕೆ.ಸಿ.ನಾರಾಯಣಗೌಡ ಬೇಡಿಕೆಯಂತೆ ಸರ್ಕಾರದಿಂದ ಅಗತ್ಯ ಅನುದಾನ ನೀಡಲಾಗುವುದು ಎಂದರಲ್ಲದೆ, ನಮ್ಮ ಸರ್ಕಾರ ಮುಂದಿನ ಮೂರೂವರೆ ವರ್ಷಗಳ ಕಾಲ ಅಧಿಕಾರದಲ್ಲಿರುವುದು ಖಚಿತ. ನಾನು ನನ್ನ ರಾಜಕೀಯ ಬದುಕಿನಲ್ಲಿ ಅನೇಕ ಶಾಸಕರನ್ನು ನೋಡಿದ್ದೇನೆ. ಆದರೆ ನಾರಾಯಣಗೌಡರಂತಹ ಸಜ್ಜನ ಹಾಗೂ ಕ್ರಿಯಾಶೀಲ ವ್ಯಕ್ತಿತ್ವದ ಪ್ರಾಮಾಣಿಕ ರಾಜಕಾರಣಿಯನ್ನು ನೋಡಿಲ್ಲ. ಇಂತಹ ಒಳ್ಳೆಯ ವ್ಯಕ್ತಿಯನ್ನು ಕೆ.ಆರ್.ಪೇಟೆ ತಾಲೂಕಿನ ಜನತೆ ಸತತ ಎರಡು ಬಾರಿ ಆಯ್ಕೆ ಮಾಡಿ ವಿಧಾನ ಸಭೆಗೆ ಕಳುಹಿಸಿದ್ದಿರಿ. ಅದೇ ರೀತಿ ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಆಶೀರ್ವಾದ ಮಾಡಿ ಕಳುಹಿಸಬೇಕು ಆ ಮೂಲಕ ತಾಲೂಕಿನ ಅಭಿವೃದ್ಧಿಗೆ ದುಡಿಯಲು ಅವರಿಗೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.
ಮಂಡ್ಯ ಮೈಶುಗರ್ ಕಾರ್ಖಾನೆ, ಪಿಎಸ್.ಎಸ್.ಕೆ ಸಕ್ಕರೆ ಕಾರ್ಖಾನೆಗಳ ಪುನಶ್ವೇತನಗೊಳಿಸಲು ಖಾಸಗಿಯವರಿಗೆ ವಹಿಸಲು ಕೂಡಲೇ ಅಗತ್ಯ ಕ್ರಮ ವಹಿಸುತ್ತೇನೆ. ಹೇಮಾವತಿ ನಾಲಾ ಆಧುನೀಕರಣ, ಕಾಂಕ್ರಿಟ್ ರಸ್ತೆ, ಬಹುಗ್ರಾಮ ಕುಡಿಯುವ ಯೋಜನೆ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ವಿದ್ಯ್ಯಾರ್ಥಿ ನಿಲಯಗಳಿಗೆ ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ, ಮಂದಗೆರೆ-ಹೇಮಗಿರಿ ನಾಲೆಗಳ ಆಧುನೀಕರಣ, ಪ್ರಾದೇಶಿಕ ಆರ್.ಟಿ.ಓ ಕಚೆÉೀರಿ, ಮೈಸೂರು- ಚನ್ನರಾಯಪಟ್ಟಣದ ರಸ್ತೆಯ ಹೆಮ್ಮನಹಳ್ಳಿಯಿಂದ ಪುರ ಗೇಟ್ ವರೆಗೆ ಜೋಡಿ ರಸ್ತೆ ನಿರ್ಮಾಣ, ಶ್ರವಣಬೆಳಗೊಳ ರಸ್ತೆಯಿಂದ ಹೊಸಹೊಳಲು ಸಿಂಗಮ್ಮನಗುಡಿಯ ವರೆಗೆ ಜೋಡಿರಸ್ತೆ ನಿರ್ಮಾಣ, ಗ್ರಂಥಾಲಯವನ್ನು ಒಳಗೊಂಡಂತೆ ಹೈಟೆಕ್ ಪಾರ್ಕ್ ನಿರ್ಮಾಣ, ದೇವಿರಮ್ಮಣ್ಣಿ ಕೆರೆಯ ಸುತ್ತ ಜಾಗಿಂಗ್ ಟ್ರ್ಯಾಕ್ ಮತ್ತು ಬೋಟಿಂಗ್ ವ್ಯವಸ್ಯೆ ಸೇರಿದಂತೆ ತಾಲೂಕನ್ನು ರಾಜ್ಯದಲ್ಲಿಯೆ ಮಾದರಿಯಾಗಿ ನಾರಾಯಣಗೌಡರು ಕೇಳಿದಂತೆ ಸಮಗ್ರ ಅಭಿವೃದ್ದಿ ಮಾಡಿಕೊಡುವುದಾಗಿ ಹೇಳಿದರು.