ಶಿವಮೊಗ್ಗ: ಶಿವಮೊಗ್ಗಕ್ಕೆ ಹೊರ ಜಿಲ್ಲೆಗಳಿಗೆ ಸಂಪರ್ಕವೆಂದರೆ ಕೇವಲ ರಸ್ತೆ ಸಂಪರ್ಕ ಮಾತ್ರವಿತ್ತು. ಆದರೆ ಮುಂದಿನ ದಿನಗಳಲ್ಲಿ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೂ ರೈಲ್ವೆ ಸಂಪರ್ಕದಲ್ಲಿ ಕ್ರಾಂತಿ ಮಾಡಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಅವರು ಮಾಧ್ಯಮಗಳ ಜೊತೆ ಮಾತನಾಡಿ ಮುಂದಿನ ದಿನಗಳಲ್ಲಿ ರೈಲ್ವೆ ಸಂಪರ್ಕದಲ್ಲಿ ಶಿವಮೊಗ್ಗ ನಗರ ಕ್ರಾಂತಿ ಸಾಧಿಸಲಿದೆ. ಸರ್ವಿಸ್ ಕೇಂದ್ರವನ್ನ ಶಿವಮೊಗ್ಗದಲ್ಲಿ ಆರಂಭಿಸಲಾಗುವುದು. 3500 ಕಿ.ಮಿ. ದೂರ ಸಾಗಿದರೆ ರೈಲು ಇಂಜಿನ್ ಗಳಿಗೆ ಸರ್ವಿಸ್ ಅವಶ್ಯಕತೆ ಇರುತ್ತದೆ. ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಸರ್ವಿಸ್ ಕೇಂದ್ರ ಎಲ್ಲೂ ಇಲ್ಲ. ಇನ್ನು ಮುಂದೆ ಇಲ್ಲಿ ಸರ್ವಿಸ್ ಕೇಂದ್ರ ಆರಂಭವಾಗುವುದರಿಂದ ಎಲ್ಲಾ ರೈಲುಗಳು ಇಲ್ಲಿಗೆ ಬರಲಿದೆ. ಇದನ್ನ ಮೂರು ವರ್ಷಗಳಲ್ಲಿ ಇವೆಲ್ಲ ಕನಸುಗಳು ನನಸಾಗಲಿವೆ ಎಂದರು.
ಸ್ಯಾಟ್ ಲೈಟ್ ರೈಲ್ವೆ ನಿಲ್ದಾಣವನ್ನು ಮೂರು ಸ್ಥಳದಲ್ಲಿ ಒಂದು ಕಡೆ ನಿರ್ಮಿಸುವ ಪ್ರಸ್ತಾವನೆ ಇದೆ. ಒಂದು ಶಿವಮೊಗ್ಗ, ಕೋಟೆಗಂಗೂರು, ಹಾಗೂ ತಾಳಗುಪ್ಪ ರೈಲ್ವೆ ನಿಲ್ದಾಣಗಳಲ್ಲಿ ನಿರ್ಮಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇವುಗಳನ್ನು ರಾಜಕೀಯವಾಗಿ ಪರಿಗಣಿಸುವುದಕ್ಕಿಂತ ತಾಂತ್ರಿಕವಾಗಿ ಯೋಚಿಸಿ ನಿರ್ಧರಿಸುವ ಅಗತ್ಯವಿದೆ ಎಂದರು.
ಸದ್ಯಕ್ಕೆ ಆರಂಭವಾಗಿರುವ ವಾರಕ್ಕೊಮ್ಮೆ ರೈಲ್ವೆಗಳು ಇನ್ನು 15-20 ದಿನಗಳಲ್ಲಿ ವಾರಕ್ಕೆ ಎರಡು ಬಾರಿ ಸಂಚರಿಸಲಿವೆ. ತಿರುಪತಿಯಲ್ಲಿ ದೇವರ ದರ್ಶನ ಮಾಡಿಕೊಂಡು ಬರುವವರಿಗೆ ವಾರಕ್ಕೆ ಎರಡು ಬಾರಿ ಸಂಚರಿಸುವ ರೈಲಿನಿಂದ ಅನುಕೂಲವಾಗಲಿದೆ ಎಂದರು.
ಶಿವಮೊಗ್ಗದಿಂದ ಶಿಕಾರಿಪುರದ ಮೂಲಕ ರಾಣೇಬೆನ್ನೂರಿಗೆ ತಲುಪುವ ರೈಲ್ವೆ ಸಂಪರ್ಕಕ್ಕೆ ಸರ್ವೆ ನಡೆಯಬೇಕಿದೆ. ಇಲ್ಲಿ ಮೂರು ಉಪವಿಭಾಗಗಳ ಸಮಸ್ಯೆ ಇತ್ತು. ಇದನ್ನು ನಿವಾರಿಸಿ ಮೂರು ಉಪವಿಭಾಗಗಳನ್ನು ಸರಿದೂಗಿಸಿ ಒಬ್ಬ ಎಸ್ ಎಲ್ ಓ ಗಳನ್ನ ನೇಮಿಸಲಾಗುತ್ತಿದೆ. ಇವರ ಮೂಲಕ ಸರ್ವೆ ನಡೆಸಿ ರೈಲ್ವೆ ಸಂಪರ್ಕವನ್ನ ಆದಷ್ಟು ಬೇಗ ಸಂಪರ್ಕಿಸಲಾಗುವುದು. ಬೀರೂರು ಹಾಗೂ ಶಿವಮೊಗ್ಗದ ನಡುವೆ ಡಬ್ಬಲಿಂಗ್ ರೈಲ್ವೆ ಟ್ರಾಕ್ ನಿರ್ಮಾಣವನ್ನೂ ಆದಷ್ಟು ಬೇಗ ಮಾಡಲಾಗುವುದು. ಇದಕ್ಕೆ ಬೈರಪ್ಪನಹಳ್ಳಿಯಲ್ಲಿ ರೈಲ್ವೆ ಟರ್ಮಿನಲ್ ನಿರ್ಮಾಣವಾದರೆ ಈ ಡಬ್ಬಲಿಂಗ್ ಬೇಗ ಆಗಲಿದೆ ಎಂದರು.