ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ಭಾಗಮಂಡಲ ಸಮೀಪದ ದೇವಾಟ್ ಪರಂಬುವಿನಲ್ಲಿ ಟಿಪ್ಪು ಸುಲ್ತಾನನ ದಾಳಿಯಿಂದ ಸಾವನ್ನಪ್ಪಿದವರಿಗೆ ಪುಷ್ಪಾಂಜಲಿಯನ್ನು ಅರ್ಪಿಸಲಾಯಿತು.
1785ರ ಡಿ.12ರಂದು ನಡೆದ ನರಮೇಧ ದುರಂತಕ್ಕೆ ಬಲಿಯಾದವರಿಗೆ ಶ್ರದ್ಧಾ ಭಕ್ತಿಯಿಂದ ಶಾಂತಿ ಕೋರಲಾಯಿತು. 32 ಬಾರಿ ಕೊಡವ ಬುಡಕಟ್ಟು ಯೋಧರಿಂದ ಸತತ ಸೋಲುಂಡ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್, ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿಯ ಮಿತ್ರ ಪಡೆಯೊಂದಿಗೆ ಫ್ರೆಂಚ್ ಜನರಲ್ ಲಾಲಿ ಮತ್ತು ಕರ್ನೂಲಿನ ನವಾಬ ರಣಮಸ್ತ ಖಾನ್ ಸೇನಾ ಮುಂದಾಳತ್ವದಲ್ಲಿ ದೇವಾಟ್ ಪರಂಬ್‍ನಲ್ಲಿ ಕಗ್ಗೊಲೆ ನಡೆಸಿದ್ದ. ಈ ಹಿನ್ನೆಲೆಯಲ್ಲಿ ಮಡಿದವರಿಗೆ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪುಷ್ಪಾಂಜಲಿ ಅರ್ಪಣೆ ಕಾರ್ಯಕ್ರಮದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ, ಕಲಿಯಂಡ ಪ್ರಕಾಶ್, ಅಪ್ಪಚ್ಚಿರ ರಮ್ಮಿ ನಾಣಯ್ಯ, ಕಾಟುಮಣಿಯಂಡ ಉಮೇಶ್, ಬೇಪಡಿಯಂಡ ಬಿದ್ದಪ್ಪ, ಮಂದಪಂಡ ಮನೋಜ್, ಅಳ ಮಂಡ ಜೈ, ಮಂದಪಂಡ ಸೂರಜ್ ಮತ್ತು ಚೀಯಬರ ಸೋಮಯ್ಯ ಭಾಗವಹಿಸಿದ್ದರು.