ಮಂಡ್ಯ: ಬೇರೆಡೆಗೆ ಹೋಲಿಸಿದರೆ ರಾಜ್ಯದಲ್ಲಿ ಅತಿ ಹೆಚ್ಚು ರೈತರು ಮಂಡ್ಯ ಜಿಲ್ಲೆಯೊಂದರಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆ ಪ್ರಕರಣಗಳು ಮುಂದುವರೆಯುತ್ತಲೇ ಇವೆ. ಮಾಡಿದ ಸಾಲದ ಅಸಲು ಇರಲಿ, ಬಡ್ಡಿಯನ್ನು ಕಟ್ಟಲಾಗದ ಪರಿಸ್ಥಿತಿಯಲ್ಲಿ ಮಂಡ್ಯ ಜಿಲ್ಲೆಯ ರೈತರಿದ್ದಾರೆ.
ಕಳೆದ ಕೆಲವು ವರ್ಷಗಳ ಕಾಲ ಜಿಲ್ಲೆಯಲ್ಲಿ ಬರ ತಾಂಡವವಾಡಿದ್ದರಿಂದಾಗಿ ಹೆಚ್ಚಿನ ರೈತರು ಬೆಳೆಬೆಳೆಯಲಾರದೆ, ಬೆಳೆದರೂ ಅದು ಕೈಗೆ ಬಾರದೆ ನಾಶವಾಗಿ ಸಾಲದ ಮೇಲೆ ಸಾಲವಾಗಿ ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಕೆಲವರು ಹೇಗೋ ಚೇತರಿಸಿಕೊಳ್ಳುತ್ತಿದ್ದಾರೆಯಾದರೂ ಬಹಳಷ್ಟು ರೈತರ ಪರಿಸ್ಥಿತಿ ಹೀನಾಯವಾಗಿದೆ. ಆದ್ದರಿಂದ ಕೆಲವರು ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಜಿಲ್ಲೆಯಲ್ಲಿ ಮೇಲಿಂದ ಮೇಲೆ ರೈತರ ಆತ್ಮಹತ್ಯೆಗಳಾಗುತ್ತಿದ್ದು, ಅವು ಇದೀಗ ಸಾಮಾನ್ಯ ಎಂಬಂತಾಗಿದ್ದು, ಈ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವಂತೆ ಕಾಣುತ್ತಿಲ್ಲ. ಬ್ಯಾಂಕ್ ಸಾಲಕ್ಕಿಂತ ಹೆಚ್ಚಾಗಿ ಕೈಸಾಲಗಳನ್ನೇ ಹೆಚ್ಚಿನ ರೈತರು ಮಾಡಿದ್ದು ಅದರ ಬಡ್ಡಿ ಪಾವತಿಸುವುದರಲ್ಲಿಯೇ ತಮ್ಮ ಜೀವಮಾನ ಕಳೆದು ಹೋಗುತ್ತಿದೆ. ಹೀಗಾಗಿ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಈ ನಡುವೆ ಕೆ.ಆರ್.ಪೇಟೆ ತಾಲೂಕಿನ ದೊಡ್ಡಸೋಮನಹಳ್ಳಿ ಗ್ರಾಮದ ರೈತ ಭದ್ರೇಗೌಡ(48) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಸಾಲವೇ ಕಾರಣ ಎಂದು ಹೇಳಲಾಗಿದೆ.
ಇವರು ದೊಡ್ಡಸೋಮನಹಳ್ಳಿ ಗ್ರಾಮದಲ್ಲಿ ಸುಮಾರು ಎರಡೂವರೆ ಎಕರೆ ಖುಷ್ಕಿ ಭೂಮಿಯನ್ನು ಹೊಂದಿದ್ದಾರೆ. ಇದರಲ್ಲಿ ಬೇಸಾಯ ಮಾಡುವ ಸಲುವಾಗಿ ಅಘಲಯ ಎಸ್.ಬಿ.ಐ ಬ್ಯಾಂಕಿನಲ್ಲಿ ಒಂದೂವರೆ ಲಕ್ಷ ಬೆಳೆ ಸಾಲ ಹಾಗೂ ಅಘಲಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 80 ಸಾವಿರ ಸಾಲ ಜೊತೆಗೆ ಹಾಗೂ 2ಲಕ್ಷ ಕೈ ಸಾಲ ಮಾಡಿದ್ದರು. ತಮಗಿದ್ದ ಎರಡೂವರೆ ಎಕರೆ ಜಮೀನಿನಲ್ಲಿ ಬೆಳೆಗಾಗಿ ಸುಮಾರು 3ಕೊಳವೆ ಬಾವಿ ಕೊರೆಸಿದ್ದರು. ನೀರು ಸರಿಯಾಗಿ ಬಾರದೆ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಬೆಳೆದಿದ್ದ ರಾಗಿಯೂ ಸಹ ನೀರಿಲ್ಲದೆ ಒಣಗಿತ್ತು. ಇದರಿಂದ ಮನನೊಂದ ಜಮೀನಿನಲ್ಲಿ ಬಳಿ ನೇಣಿಗೆ ಶರಣಾಗಿದ್ದಾರೆ.
ಘಟನೆ ಕುರಿತು ಪತ್ನಿ ಮಮತಾ ಕೆ.ಆರ್.ಪೇಟೆ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರ ತಡೆಗೆ ಸರ್ಕಾರ ಕ್ರಮ ಕೈಗೊಂಡು ರೈತರಿಗೆ ಆತ್ಮಸ್ಥೈರ್ಯ ತುಂಬಬೇಕಿದೆ.