ಕಾರವಾರ: 80 ಲಕ್ಷ ರೂ. ಭಾರತೀಯ ಮೌಲ್ಯದ ವಿದೇಶಿ ಕರೆನ್ಸಿಗಳನ್ನು ಸಾಗಾಟ ಮಾಡುತ್ತಿದ್ದ ಭಟ್ಕಳ ಮೂಲದ ಇಬ್ಬರನ್ನು ಕಾರವಾರ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಪ್ರಕರಣವನ್ನು ಜಾರಿ ನಿರ್ದೇಶನಾಲಯ (ಇಡಿ) ಗೆ ಹಸ್ತಾಂತರಿಸಿದ್ದಾರೆ.
ಭಟ್ಕಳದ ಆಝಾದ್ ನಗರದ ಸಿರಾಜ್ ಕತ್ತಾರ್ ಹಾಗೂ ಅಬ್ದುಲ್ ನಜೀರನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವರಿಂದ ಇಂಗ್ಲೆಂಡ್, ಯುರೋಪ್, ಆಸ್ಟ್ರೇಲಿಯಾ ಸೇರಿದಂತೆ ೧೦ ದೇಶಗಳ ಕರೆನ್ಸಿಗಳನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ.
ಈ ವಿದೇಶಿ ಕರೆನ್ಸಿಗಳನ್ನು ಗೋವಾದ ಮಡಗಾಂವ್ ನಿಂದ ತಂದಿದ್ದು ಎಂದು ತಿಳಿದು ಬಂದಿದ್ದು ಮಡಗಾಂವ್ – ಸವಣೂರು ಬಸ್ಸಿನಲ್ಲಿ ರಾತ್ರಿ ಬಂದಿಳಿದಿದ್ದಾಗ ಚುನಾವಣಾ ನೀತಿ ಸಂಹಿತೆಯ ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸರು ಅನುಮಾನದ ಆಧಾರದ ಮೇಲೆ ಪರಿಶೀಲನೆ ನಡೆಸಿದಾಗ ಇಬ್ಬರ ಬಳಿ ವಿದೇಶಿ ಕರೆನ್ಸಿಗಳು ಪತ್ತೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಪ್ರಕರಣವನ್ನು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಹಸ್ತಾಂತರ ಮಾಡಲಾಗಿದೆ. ಹೆಚ್ಚಿನ ಮೊತ್ತದ ಹಾಗೂ ವಿದೇಶಿ ಕರೆನ್ಸಿ ಆಗಿರುವುದರಿಂದ ಇಡಿ ಅಧಿಕಾರಿಗಳೇ ವಿಚಾರಣೆ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.