ಮಳವಳ್ಳಿ: ಕುಟುಂಬ ಕಲಹದಿಂದ ಬೇಸತ್ತು ತಾಯಿಯೊಬ್ಬಳು ತಾನು ವಿಷ ಸೇವಿಸಿ ತನ್ನ ಇಬ್ಬರು ಮಕ್ಕಳಿಗೂ ವಿಷ ಕುಡಿಸಿದ ಹಿನ್ನೆಲೆಯಲ್ಲಿ ಒಂದು ಮಗು ಸಾವನ್ನಪ್ಪಿ, ಮತ್ತೊಂದು ಮಗು ಮತ್ತು ತಾಯಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಹಲಗೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದ ಶಿವಪ್ಪ ಅವರ ಪತ್ನಿ ಸೌಜನ್ಯ (24) ಎಂಬಾಕೆ ತನ್ನ ಇಬ್ಬರು ಮಕ್ಕಳಾದ ಪುನೀತ್(3) ಹಾಗೂ ಲೋಹಿತ್(1ವರ್ಷ 2ತಿಂಗಳು) ಅವರಿಗೆ ವಿಷ ನೀಡಿದ್ದು, ಬಳಿಕ ತಾನು ಸೇವಿಸಿದ್ದಾಳೆ. ವಿಷಯ ತಿಳಿದಿದ್ದ ಮೂವರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಮಗು ಲೋಹಿತ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರೆ, ತಾಯಿ ಸೌಜನ್ಯ ಮತ್ತು ಮಗ ಪುನೀತ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ವಿಷಯ ತಿಳಿದು ಸ್ಥಳಕ್ಕೆ ಮಳವಳ್ಳಿ ಡಿಎಸ್ಪಿ ಕುಮಾರಿ ಪೃಥ್ವಿ, ಇನ್ಸ್‍ಪೆಕ್ಟರ್ ಮಂಜುನಾಥ್, ಸಬ್ ಇನ್ಸ್‍ಪೆಕ್ಟರ್ ಚೌಡೇಗೌಡ ಭೇಟಿ ಮಹಜರು ನಡೆಸಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.