ಕೆ.ಆರ್.ಪೇಟೆ: ಉತ್ತಮವಾಗಿ ನಡೆಯುತ್ತಿದ್ದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಕೆಡವಿದ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ನಾರಾಯಣಗೌಡ ಸೇರಿದಂತೆ ಈಗ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಎಲ್ಲಾ 15ಕ್ಷೇತ್ರಗಳ ಅನರ್ಹ ಶಾಸಕರನ್ನು ಸೋಲಿಸುವುದೇ ಜೆಡಿಎಸ್ ಪಕ್ಷದ ಮುಖ್ಯ ಗುರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ ಅವರ ಹೊಸ ಮನೆಯ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಮೈತ್ರಿ ಸರ್ಕಾರವನ್ನು ಕೆಡವಿದ ಕೆ.ಆರ್.ಪೇಟೆ ಕ್ಷೇತ್ರದ ನಾರಾಯಣಗೌಡರನ್ನು ಈ ಉಪ ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಲು ಕ್ಷೇತ್ರದಾದ್ಯಂತ ಸೈನಿಕರ ಮಾದರಿಯಲ್ಲಿ ನಮ್ಮ ಜೆಡಿಎಸ್ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು. ಈ ಮೂಲಕ ನಿಮ್ಮ ಕುಮಾರಣ್ಣನಿಗೆ ಮೋಸ ಮಾಡಿದವರಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಕರೆ ನೀಡಿದರು.
ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡಗೆ ಬೆಂಬಲ ನೀಡಲಾಗುವುದು. ಉಳಿದ ಎಲ್ಲ 14 ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷವು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಕೆ.ಆರ್.ಪೇಟೆ ಕ್ಷೇತ್ರಕ್ಕೆ ಪಕ್ಷದ ಹಿರಿಯ ಮುಖಂಡ ಬಿ.ಎಲ್.ದೇವರಾಜು ಅವರನ್ನು ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಹಾಗಾಗಿ ಪಕ್ಷದ ಎಲ್ಲ ಕಾರ್ಯಕರ್ತರು ಪ್ರಾಮಾಣಿಕ ವ್ಯಕ್ತಿಯಾದ ಬಿ.ಎಲ್.ದೇವರಾಜು ಅವರ ಗೆಲುವಿಗೆ ದುಡಿಯಬೇಕು. ನಾನು ದೇಶದಲ್ಲಿಯೇ ಎಲ್ಲೂ ಮಾಡದ ಇರುವಂತಹ ರೈತರ ಸಾಲವನ್ನು ಸುಮಾರು 48ಸಾವಿರ ಕೋಟಿ ಮನ್ನಾ ಮಾಡಿ ದಾಖಲೆ ನಿರ್ಮಿಸಿದ್ದೇನೆ.
ಇದರಿಂದ ರಾಜ್ಯದ ಲಕ್ಷಾಂತರ ರೈತರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ. ಕೆ.ಆರ್.ಪೇಟೆ ತಾಲೂಕಿಗೆ ನಾನು ಕೊಟ್ಟ ಸುಮಾರು 700ಕೋಟಿ ಅನುದಾನವನ್ನು ಸರ್ಕಾರದ ದಾಖಲೆಗಳಲ್ಲಿ ದಾಖಲಾಗಿದೆ ಆದರೆ ನಾನು ಕೊಟ್ಟ ಅನುದಾನವನ್ನು ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟಿದ್ದಾರೆ ಎಂದು ಹೇಳಿಕೊಂಡು ತಿರುಗುತ್ತಿರುವ ನಾರಾಯಣಗೌಡ ಅವರನ್ನು ಈ ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸದೇ ವಿರಮಿಸುವುದಿಲ್ಲ.
ಕೆ.ಆರ್.ಪೇಟೆ ಕ್ಷೇತ್ರದಾದ್ಯಂತ ವ್ಯಾಪಕ ಪ್ರಚಾರ ನಡೆಸಿ ಅತ್ಯಧಿಕ ಮತಗಳಿಂದ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ನಮ್ಮ ಪಕ್ಷವು ಎರಡು ಬಾರಿ ವಿರೋಧದ ನಡುವೆಯೂ ಪಕ್ಷದ ಟಿಕೆಟ್ ನೀಡಿ ಗೆಲ್ಲಿಸಿದ್ದಕ್ಕೆ ಒಳ್ಳೆಯ ಬಹುಮಾನ ನೀಡಿದ ನಾರಾಯಣಗೌಡ ಅವರ ಬಗ್ಗೆ ಈಗ ಮಾತನಾಡಲು ಹೋಗುವುದಿಲ್ಲ. ಚುನಾವಣಾ ಪ್ರಚಾರ ಸಭೆಗಳಲ್ಲಿ ನಾರಾಯಣಗೌಡ ನನ್ನ ವಿರುದ್ಧ ಮಾಡುತ್ತಿರುವ ಎಲ್ಲ ಆರೋಪಗಳಿಗೆ ಸೂಕ್ತ ದಾಖಲೆಗಳೊಂದಿಗೆ ಮತದಾರರಿಗೆ ಉತ್ತರ ನೀಡುತ್ತೇನೆ ಎಂದು ಹೇಳಿದರು.