ಕಾರವಾರ: ಶಿವರಾಮ್ ಹೆಬ್ಬಾರ್ ಅವರು ಉಪ ಚುನಾವಣೆಯಲ್ಲಿ ಗೆಲ್ಲಬೇಕು ಮತ್ತು ಮಂತ್ರಿಯಾಗಬೇಕು ಎಂದು ರಾಜ್ಯ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆಶಯ ವ್ಯಕ್ತಪಡಿಸಿದ್ದರು.
ಉತ್ತರ ಕನ್ನಡ ಜಿಲ್ಲೆಉ ಶಿರಸಿ ತಾಲೂಕಿನ ಬನವಾಸಿಯ ನ್ಯಾಮದೇವ ಸಭಾಂಗಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾಜಿ ಶಾಸಕರಾದ ವಿ. ಎಸ್. ಪಾಟೀಲ್ ಮತ್ತು ಹೆಬ್ಬಾರ್ ಜೋಡೆತ್ತು ರೀತಿಯಲ್ಲಿ ಕೆಲಸ ಮಾಡಬೇಕು. ಅವರು ಹಕ್ಕ ಬುಕ್ಕರಂತೆ, ರಾಮ ಲಕ್ಷ್ಮಣರಂತೆ ಕೆಲಸ ಮಾಡಬೇಕು ಎನ್ನುವುದು ಬಿಜೆಪಿಯ ಆಶಯವಾಗಿದೆ.
ಆದ ಕಾರಣ ಕಾರ್ಯಕರ್ತರು ಮನೆ ಮನೆಗೆ ಹೋಗಿ ಮತದಾರರನ್ನು ಭೇಟಿಯಾಗಿ ಅವರ ಮನವೊಲಿಸಬೇಕು ಎಂದ ಅವರು, ಅವರ ತ್ಯಾಗದಿಂದ ಸರ್ಕಾರ ಬಂದಿದ್ದು, ಎಲ್ಲರೂ ಒಂದಾಗಿ ಕೆಲಸ ಮಾಡೋಣ ಎಂದರು.
ಬಿಜೆಪಿ ಅಭ್ಯರ್ಥಿ ಹೆಬ್ಬಾರ್ ಮಾತನಾಡಿ, ರಾಜಕಾರಣ ನಿಂತ ನೀರಲ್ಲ. ಎಂದಿಗೂ ಹರಿಯುತ್ತ ಇರುತ್ತದೆ. ಇಲ್ಲಿ ಅನೇಕರಿಗೆ ನಾನು ಹೊಸಬ. ಅನೇಕರು ನನಗೆ ಹೊಸಬರು. ಆದರೆ ಎಲ್ಲರೊಂದಿಗೆ ಸೇರಿ ಪಕ್ಷ ಕಟ್ಟುವ ಕೆಲಸ ಮಾಡಲಾಗುತ್ತದೆ. ಯಾರನ್ನೂ ಸಹ ಮಲತಾಯಿ ಮಕ್ಕಳಂತೆ ನೋಡುವುದಿಲ್ಲ. ಅನೇಕರಿಗೆ ನ್ಯಾಯ ಅನ್ಯಾಯ ಆಗಿರಬಹುದು. ಆದರೆ ಅದನ್ನೆಲ್ಲಾ ಹೊಟ್ಟೆಯಲ್ಲಿ ಇಟ್ಟುಕೊಂಡು ಯುದ್ಧ ಗೆಲ್ಲಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಜಿ. ನಾಯ್ಕ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.