ಶಿವಮೊಗ್ಗ: ರಸ್ತೆಯಲ್ಲಿ ಬಿದ್ದಿರುವ ಗುಂಡಿ ಮುಚ್ಚಲು ವಿನೂತನ ರೀತಿಯ ಪ್ರತಿಭಟನೆ ನಡೆಸಿದ ಪ್ರಜಾಕೀಯ ಪಕ್ಷದ ಮುಖಂಡರೋರ್ವರ ಫೋಟೊ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಜೈಲ್ ರಸ್ತೆಯಲ್ಲಿ ಇಂದು ಬೆಳಗ್ಗೆ ಗುಂಡಿ ತೆಗೆದು ಅದನ್ನು ಮುಚ್ಚಿ ಅದರ ಮೇಲೆ ಕಬ್ಬಿಣದ ರಾಡನ್ನು ನೆಟ್ಟು ರಾಜಕೀಯದ ಕೊಡುಗೆ ಬದಲಾವಣೆಗಾಗಿ ಎಂದು ಫಲಕ ಹಾಕಲಾಗಿದೆ.
ಅದರ ಕೆಳಗೆ ಎರಡು ಪ್ಲಾಸ್ಟಿಕ್ ಹಾವುಗಳನ್ನು ಇಡಲಾಗಿದೆ. ಅದರ ಸುತ್ತ ಹೂವಿನ ಮಾಲೆ ಹಾಕಿ ಊದುಬತ್ತಿ ಹಚ್ಚಲಾಗಿದೆ. ಶಿವಮೊಗ್ಗದ ವಿಧಾನ ಸಭಾ ಕ್ಷೇತ್ರದ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ವೆಂಕಟೇಶ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
ಶಿವಮೊಗ್ಗ ಮಹಾನಗರ ಪಾಲಿಕೆಯವರು ಜೈಲ್ ವೃತ್ತದಲ್ಲಿ ಗುಂಡಿ ಅಗೆದು ಅದನ್ನು ಮುಚ್ಚುವಾಗ ಸುಮಾರು ಎರಡು ಅಡಿಯಷ್ಟು ಎತ್ತರದ ಮಣ್ಣಿನ ದಿಬ್ಬವನ್ನು ಹಾಗೇ ಬಿಟ್ಟಿದ್ದರು. ಇದರಿಂದಾಗಿ ವಾಹನ ಸವಾರರಿಗೆ ಸಾಕಷ್ಟು ಸಮಸ್ಯೆಯಾಗಿತ್ತು. ಈ ಸಮಸ್ಯೆಯನ್ನು ಗಮನಿಸಿದ ಪ್ರಜಾಕೀಯ ಪಕ್ಷದ ವೆಂಕಟೇಶ್, ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಪಾಲಿಕೆ ಗಮನಕ್ಕೆ ತರಬೇಕು ಎಂದು ಆ ಮಣ್ಣಿನಲ್ಲೇ ದಿಬ್ಬ ನಿರ್ಮಿಸಿ, ಅರಿಶಿಣ ಕುಂಕುಮ ಹಚ್ಚಿ ಹಾವಿನ ಹುತ್ತದಂತೆ ಮಾಡಿ ಕೃತಕ ಹಾವನ್ನೂ ಇಟ್ಟು ಪಾಲಿಕೆಯ ವಿರುದ್ಧ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.