ಪಾಂಡವಪುರ: ನೆಲಕ್ಕುರುಳಿದ ಪುರಾತನ ಬೃಹತ್ ಮರಗಳು.. ಎಲ್ಲೆಂದರಲ್ಲಿ ಹಾಕಲಾದ ಮಣ್ಣಿನ ರಾಶಿಗಳು.. ಧೂಳುಮಯ ರಸ್ತೆಗಳು.. ಮುಗಿಯದ ಕಾಮಗಾರಿಗಳು.. ಹೀಗೆ ಒಂದು ಎರಡಲ್ಲ ಹತ್ತಾರು ರಗಳೆಗಳು ಪಾಂಡವಪುರದ ಜನರನ್ನು ದಿನ ನಿತ್ಯ ಕಾಡುತ್ತಿದೆ.
ಪಾಂಡವಪುರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಭಿವೃದ್ಧಿ ಮತ್ತು ವಿಸ್ತರಣೆ ಕಾಮಗಾರಿ ಈಗಾಗಲೇ ಪ್ರಾರಂಭವಾಗಿ ವರ್ಷ ಕಳೆಯುತ್ತಾ ಬಂದಿದೆ. ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಇದರಿಂದ ರಸ್ತೆಯಲ್ಲಿ ಸಾಗುವ ಜನ ದಿನನಿತ್ಯ ಪರದಾಡುವಂತಾಗಿದೆ. ಜತೆಗೆ ರಸ್ತೆ ಅಗಲೀಕರಣದ ನೆಪದಲ್ಲಿ ಇನ್ನೂರು ವರ್ಷಗಳಿಗೂ ಹೆಚ್ಚು ವರ್ಷದ ಪುರಾತನ ಬೃಹತ್ ಗಾತ್ರದ ಮರಗಳನ್ನು ನೆಲಕ್ಕುರುಳಿಸಲಾಗಿದೆ. ಆದರೆ ಮರವನ್ನು ಕಾಂಡ ಸಹಿತ ಬೇರನ್ನು ತೆಗೆಯದ ಕಾರಣದಿಂದಾಗಿ ಅದು ಅಲ್ಲಿಯೇ ಉಳಿದು ಹೋಗಿದ್ದು ಇದರಿಂದ ನಡೆದಾಡಲು ಕಷ್ಟ ಪಡುವಂತಾಗಿದೆ.
ಬೇರುಗಳು ರಸ್ತೆಯಲ್ಲಿ ಹಲವು ತಿಂಗಳಿಂದ ಹಾಗೆಯೇ ಇರುವುದು ಕಿರಿಕಿರಿಯಾಗುತ್ತಿದೆ. ಇದರೊಂದಿಗೆ ರಸ್ತೆಯ ಎರಡು ಬದಿಗಳಲ್ಲೂ ಹಳ್ಳ ಕೊಳ್ಳಗಳಿಂದ ತುಂಬಿವೆ. ಹೀಗಾಗಿ ಬಿಸಿಲು ಬಂದರೆ ದ್ವಿಚಕ್ರ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ಧೂಳಿನ ಹಾಗೂ ಮಳೆ ಬಂದರೆ ಕೆಸರಿನ ಸಿಂಚನ ತಪ್ಪಿದಲ್ಲ. ಅದರಲ್ಲೂ ಇದೇ ಮಾರ್ಗವಾಗಿ ತೆರಳುವ ವಿದ್ಯಾರ್ಥಿಗಳಿಗೆ ದಿನನಿತ್ಯ ಧೂಳಿನ ಅಭಿಷೇಕವಾಗುತ್ತಿದ್ದು, ಸಮವಸ್ತ್ರಗಳನ್ನು ಧರಿಸಿ ತೆರಳುವವರು ಧೂಳಿನಲ್ಲಿ ಮಿಂದೇಳುವಂತಾಗಿದೆ.
ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣ, ರಸ್ತೆ ಅಭಿವೃದ್ಧಿ ಕಾಮಗಾರಿ ಉತ್ತಮ ಗುಣಮಟ್ಟದಲ್ಲಿಯೇ ನಡೆಯುತ್ತಿದೆ ಆದರೆ ಮಂದಗತಿಯಲ್ಲಿ ಕಾಮಗಾರಿಗಳು ಸಾಗುತ್ತಿರುವುದು ಸಾರ್ವಜನಿಕರಿಗೆ ಹಾಗೂ ವ್ಯಾಪಾgಸ್ಥರಿಗೆ ತೀವ್ರ ಕಿರಿ ಕಿರಿ ಉಂಟಾಗುತ್ತಿರುವುದು ಕಂಡು ಬರುತ್ತಿದೆ.
ಪಟ್ಟಣದ ಡಾ. ರಾಜಕುಮಾರ ವೃತ್ತದಿಂದ ಬಾಲಕಿಯರ ಕಾಲೇಜಿನವರೆಗಿನ ನಾಗಮಂಗಲ ರಸ್ತೆ ಪೊಲೀಸ್ ಸ್ಟೇಷನ್ ರಸ್ತೆ ಪೇಟೆ ಬೀದಿ ಸೇರಿದಂತೆ ಲೋಕೋಪಯೋಗಿ ಇಲಾಖೆ ವತಿಯಿಂದ ನಗರೋತ್ಥಾನ ಯೋಜನೆಯಡಿಯಲ್ಲಿ 145 ಕೋಟಿ ರೂ ವೆಚ್ಚದಲ್ಲಿ ಕಳೆದ ಜನವರಿಯಲ್ಲಿ ಭೂಮಿ ಪೂಜೆ ನಡೆದಿದ್ದು. ಆದರೆ ಹಲವು ತಿಂಗಳು ಕಳೆದರೂ ಪೂರ್ಣವಾಗದೆ ಇರುವುದರಿಂದ ವಾಹನ ಚಾಲಕರು ರಸ್ತೆಯಲ್ಲೆ ಬಿದ್ದು ಗ್ರಾಯಗೊಂಡ ನಿದರ್ಶನಗಳು ಸಾಕಷ್ಟು ಇವೆ. ಜತೆಗೆ ನಡೆದಾಡುವ ಪಾದಚಾರಿಗಳು ಕೂಡ ತೊಂದರೆ ಅನುಭವಿಸಿದ್ದಾರೆ. ಹೀಗಾಗಿ ಇಲ್ಲಿ ನಡೆದಾಡುವಾಗಲೆಲ್ಲ ಹಿಡಿ ಶಾಪ ಹಾಕುತ್ತಾ ಸಾಗುವುದು ಮಾಮೂಲಿಯಾಗಿದೆ. ಇತ್ತೀಚಿನ ದಿನಗಳಲ್ಲಿ ನಿತ್ಯ ಮಳೆ ಸುರಿಯುತ್ತಿದ್ದಾಗಲಂತು ಮಳೆ ನೀರಿನಿಂದ ರಸ್ತೆಗೆ ಸುರಿದಿರುವ ಮಣ್ಣು ಕೆಸರುಗದ್ದೆಯಂತಾಗಿ ವಾಹನ ಚಾಲಕರು ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಘಟನೆಗಳು ನಡೆದಿವೆ.
ರಸ್ತೆ ಅಭಿವೃದ್ದಿ, ಚರಂಡಿ ನಿರ್ಮಾಣಕ್ಕಾಗಿ ಅಂಗಡಿ ಮುಂಗಟ್ಟುಗಳ ಎದುರು ರಸ್ತೆ ಅಗೆದಿರುವುದರಿಂದ ವ್ಯಾಪಾರ ವಹಿವಾಟು ಕುಸಿದಿದೆ. ಇದರಿಂದ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎಂಬುದು ವ್ಯಾಪಾರಸ್ಥರ ಅಳಲಾಗಿದೆ. ರಸ್ತೆ ಕಾಮಗಾರಿಯಿಂದಾಗಿ ಜನ ಬಾರದೆ ಮೈಸೂರು ನಗರದತ್ತ ತೆರಳಿ ಖರೀದಿಸುವುದರಿಂದ ಸ್ಥಳೀಯ ವ್ಯಾಪಾರಕ್ಕೆ ತೀವ್ರ ತೊಂದರೆಯಾಗಿ ನಮಗೆ ನಷ್ಟವಾಗುತ್ತಿದೆ. ಈಗಿನ ಪರಿಸ್ಥಿತಿಯಲ್ಲಿ ಅಂಗಡಿ ಬಾಡಿಗೆ ಕಟ್ಟಲಾರದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುವುದು ಅಂಗಡಿ ಮಾಲೀಕರು ಗೋಳಾಗಿದೆ.
ಕಾಮಗಾರಿಗಳನ್ನು ಬೇಗ ಮುಗಿಸಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆದಾರರು ಈ ಬಗ್ಗೆ ಗಮನಹರಿಸಿ ಶೀಘ್ರವೇ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.