ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಒಟ್ಟು 11 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಅಂತೆಯೇ ನಾಮಪತ್ರಕ್ಕೆ ಕೊನೆಯ ದಿನವಾಗಿದ್ದು ಬಿಜೆಪಿ ಅಭ್ಯರ್ಥಿಯಾಗಿ ಶಿವರಾಮ್ ಹೆಬ್ಬಾರ್ ಅವರು ಸೋಮವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ಸಿನಿಂದ ಭೀಮಣ್ಣ ನಾಯ್ಕ ಈಗಾಗಲೇ ತಮ್ಮ ನಾಮಪತ್ರ ಸಲ್ಲಿಸಿದ್ದು, ಜೆಡಿಎಸ್ ನಿಂದ ಚೈತ್ರಾ ಗೌಡ ಅವರು ಮೊದಲ ಬಾರಿಗೆ ವಿಧಾನಸಭಾ ಕ್ಷೇತ್ರದ ಕಣಕಿಳಿದಿದ್ದಾರೆ. ಒಟ್ಟು 11 ಜನ ಅಭ್ಯರ್ಥಿಗಳು 20 ನಾಮಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಿವರಾಮ್ ಹೆಬ್ಬಾರ ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರಿದ್ದೇನೆ. ಉಪಚನಾವಣೆಯಲ್ಲೂ ಕ್ಷೇತ್ರದ ಜನತೆ ತನ್ನ ಜೊತೆಗಿದ್ದಾರೆ ಎನ್ನುವ ನಂಬಿಕೆ ನನಗಿದೆ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶವಾಗಿದೆ. ಎದುರಾಳಿ ಯಾರೇ ಇರಲಿ ಗೆಲುವು ನನ್ನದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.