ಮಡಿಕೇರಿ: ಜಿಲ್ಲೆಯಾದ್ಯಂತ ಡಿ.2ರಿಂದ 10ರವರೆಗೆ ನಡೆಯುವ ಮೊದಲನೇ ಸುತ್ತಿನ ಮಿಷನ್ ಇಂದ್ರಧನುಷ್ ಕಾರ್ಯಕ್ರಮ ಯಶಸ್ವಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಮಿಷನ್ ಇಂದ್ರಧನುಷ್ ಮತ್ತು ಶಾಲಾ ಲಸಿಕಾ ಅಭಿಯಾನ ಕಾರ್ಯಕ್ರಮದ ಜಿಲ್ಲಾ ಲಸಿಕಾ ಕಾರ್ಯಪಡೆಯ ಪೂರ್ವಭಾವಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಿಷನ್ ಇಂದ್ರಧನುಷ್ ಅಭಿಯಾನದಲ್ಲಿ ಯಾವುದೇ ಮಗು ಮತ್ತು ಗರ್ಭಿಣಿಯರು ಲಸಿಕೆ ಹಾಗೂ ಚುಚ್ಚುಮದ್ದಿನಿಂದ ವಂಚಿತರಾಗಬಾರದು. ಈ ಲಸಿಕೆಯನ್ನು ತಪ್ಪದೇ ನೀಡಬೇಕು. ಮತ್ತು ಅದರ ಪ್ರಯೋಜನಗಳ ಬಗ್ಗೆ ಮಹಿಳೆಯರು ಹಾಗೂ ಗರ್ಭಿಣಿಯರಲ್ಲಿ ಅರಿವು ಮೂಡಿಸಬೇಕು ಎಂದು ಅವರು ತಿಳಿಸಿದರು.
ಎಲ್ಲಾ ಆರೋಗ್ಯ ಕಾರ್ಯಕರ್ತೆಯರು ತಮ್ಮ ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ ಗರ್ಭಿಣಿಯರು ಮತ್ತು ಒಂದು ಮಗುವೂ ಬಿಟ್ಟು ಹೋಗದ ರೀತಿಯಲ್ಲಿ ಯೋಜನೆಯನ್ನು ರೂಪಿಸಿ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಲಸಿಕೆಯನ್ನು ಹೇಗೆ ನೀಡಬೇಕು ಎಂಬುದರ ಬಗ್ಗೆ ತರಬೇತಿಯನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿನ ತಲುಪಲು ಕಷ್ಟಕರವಾದ ಪ್ರದೇಶಗಳ ಕಡೆ ಹೆಚ್ಚಿನ ಗಮನಹರಿಸುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೈಸೂರು ವಿಭಾಗದ ಡಬ್ಲ್ಯುಎಚ್‍ಒ ಸಲಹೆಗಾರರಾದ ಡಾ.ಸುದೀರ್ ನಾಯಕ್ ಅವರು ಮಾತನಾಡಿ ಲಸಿಕೆ ಕಾರ್ಯಕ್ರಮದಿಂದ ದೂರ ಉಳಿದಿರುವ ಗರ್ಭಿಣಿಯರು ಮತ್ತು ಮಕ್ಕಳಿಗೆ ಲಸಿಕೆಯನ್ನು ತಲುಪಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಆಶಾ ಕಾರ್ಯಕರ್ತರು ಇಲ್ಲದ ಕಡೆ ಅಂಗನವಾಡಿ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದ್ದು, ಅಗತ್ಯ ಔಷಧಗಳ ದಾಸ್ತಾನುಗಳು ಲಭ್ಯವಿದೆ ಎಂದು ಅವರು ಮಾಹಿತಿ ನೀಡಿದರು.