ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಗಡಿಗ್ರಾಮ ಗೋಪಿನಾಥಂ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ವಾಸ್ತವ್ಯ ಮಾಡಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ವಿಷಯಗಳ ಕುರಿತು ಸಂವಾದ ನಡೆಸಿದ್ದಾರೆ.
ವ್ಯಾಸಂಗಕ್ಕಾಗಿ ನಿಮಗೆ ಏನೇನು ಅಗತ್ಯವಿದೆ? ಸೌಲಭ್ಯಗಳು ಲಭ್ಯವಿದೆಯೇ? ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಪ್ರಯೋಗಾಲಯ, ಕುಡಿಯುವ ನೀರು, ಹೆಚ್ಚುವರಿ ಶಾಲಾ ಕೊಠಡಿ, ಪಿಯು ಕಾಲೇಜು, ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ಇದೇ ವೇಳೆ ಒಂದರಿಂದ ನಾಲ್ಕನೇ ತರಗತಿಯವರೆಗೆ ಕನ್ನಡ ಮಾಧ್ಯಮ ತೆರೆಯಬೇಕೆಂಬ ಕೋರಿಕೆ ಯನ್ನು ವಿದ್ಯಾರ್ಥಿಗಳು ಶಿಕ್ಷಣ ಸಚಿವರ ಮುಂದಿಟ್ಟರು. ಈ ವೇಳೆ ಸಚಿವರು ಗ್ರಾಮಸ್ಥರ ಅಹವಾಲು, ಸಮಸ್ಯೆಗಳನ್ನು ಆಲಿಸಿದರಲ್ಲದೆ, ರಸ್ತೆ, ಬಸ್‍ಸೌಲಭ್ಯ, ಶುದ್ಧ ಕುಡಿಯುವ ನೀರು, ರೈತರಿಗೆ ಸೌಲಭ್ಯ ತಲುಪಿಸಲು ಅದಾಲತ್ ನಂತಹ ಸೌಕರ್ಯ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುವುದೆಂದು ಸಚಿವರು ಭರವಸೆ ನೀಡಿದ್ದಾರೆ.
ಗೋಪಿನಾಥಂ ಗ್ರಾಮದಲ್ಲಿ ಒಂದರಿಂದ ನಾಲ್ಕನೇ ತರಗತಿಯವರೆಗೆ ತಮಿಳು ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಮಾತ್ರ ಅವಕಾಶವಿದೆ. ಹೀಗಾಗಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಆರಂಭಿಸಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿದ್ದು ಈ ಸಂದರ್ಭ ಆದ್ಯತೆ ಮೇರೆಗೆ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಆರಂಭಿಸಲು ಕ್ರಮವಹಿಸುವುದಾಗಿ ಸಚಿವರಾದ ಸುರೇಶ್ ಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ತಮ್ಮ ಎರಡನೇ ಶಾಲಾ ವಾಸ್ತವ್ಯವನ್ನು ಗಡಿಭಾಗದ ಗೋಪಿನಾಥಂನಲ್ಲಿ ಹಮ್ಮಿಕೊಂಡಿದ್ದು, ಶಾಲಾ ವಾಸ್ತವ್ಯದಿಂದ ಹೆಚ್ಚು ಸಮಯ ಶಾಲಾ ಸಮಸ್ಯೆಗಳನ್ನು ಅರಿತು ಪರಿಹರಿಸಲು ಸಹಾಯಕವಾಗಲಿದೆ. ಜತೆಗೆ ಗ್ರಾಮಸ್ಥರ ಅಹವಾಲು ಕುಂದುಕೊರತೆಗಳನ್ನು ಆಲಿಸಿ ಪರಿಹರಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರಲ್ಲದೆ, ವಿದ್ಯಾರ್ಥಿಗಳು ಮನವಿ ಮಾಡಿರುವ ಪ್ರಯೋಗಾಲಯ, ಹಾಸ್ಟೆಲ್ ಪ್ರವೇಶ, ಕುಡಿಯುವ ನೀರು ಒದಗಿಸಲು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು. ಕನ್ನಡ, ಹಿಂದಿ, ಇಂಗ್ಲಿಷ್ ಶಿಕ್ಷಕರ ನಿಯೋಜನೆಗೆ ಡಿಡಿಪಿಐ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.
ಸಚಿವರೊಂದಿಗೆ ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮರಗದ ಮಣಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಮಂಜುಳ, ತಾಲೂಕು ಪಂಚಾಯತ್ ಸದಸ್ಯರಾದ ಶಕುಂತಲಾ ರಾಜ್, ಗ್ರಾ.ಪಂ.ಅಧ್ಯಕ್ಷರಾದ ಮುರುಗೇಶನ್, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್.ನಾರಾಯಣ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ ಕುಮಾರ್, ಡಿಡಿಪಿಐ ಮಂಜುನಾಥ್ ಇತರೆ ಅಧಿಕಾರಿಗಳು ಇದ್ದರು.