ಮಂಡ್ಯ: ಭಾರತ ಚುನಾವಣಾ ಆಯೋದಗಿಂದ ನೇಮಕವಾಗಿರುವ ಚುನಾವಣಾ ವೀಕ್ಷಕರಾದ ಊರ್ಮಿಳಾ ಸುರೇಂದ್ರ ಶುಕ್ಲಾ ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಭೇಟಿ ನೀಡಿ ಕೆ.ಆರ್.ಪೇಟೆ ಕ್ಷೇತ್ರದ ಉಪಚುನಾವಣೆ ಸಿದ್ಧತೆಯ ಬಗ್ಗೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಾಂತಿಯುತ ಹಾಗೂ ನಿಷ್ಪಕ್ಷ ಪಾತ ಮತದಾನ ಪ್ರಕ್ರಿಯೆ ನೆರವೇರಿಸುವಲ್ಲಿ ಸಹಾಯಕ ಚುನಾವಣಾಧಿಕಾರಿ, ಸೆಕ್ಟರ್ ಅಧಿಕಾರಿಗಳು, ವಿವಿಧ ಅಕ್ರಮ ತಡೆ ತಂಡಗಳು ದಕ್ಷ ತೆಯಿಂದ ಚುನಾವಣೆ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಕೆ.ಆರ್.ಪೇಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಅಧಿಕಾರಿಗಳು ಅತ್ಯಂತ ಜಾಗೃತಿಯಿಂದ ಕೆಲಸ ನಿರ್ವಹಿಸಬೇಕು. ಪ್ರತಿ ಚುನಾವಣೆ ಕೂಡ ಹೊಸದಾಗಿರುತ್ತದೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಚುನಾವಣಾ ನೇಮಿಸಿರುವ ಅಧಿಕಾರಿಗಳು ಚುನಾವಣಾ ಕೆಲಸವನ್ನು ನಿರ್ವಹಿಸಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಂಡ್ಯ ಜಿಲ್ಲಾಧಿಕಾರಿಗಳಾದ ಡಾ.ಎಂ.ವಿ.ವೆಂಕಟೇಶ್ ಅವರು ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 2,08,937 ಮತದಾರರಿದ್ದು, ಅದರಲ್ಲಿ 1,06,088 ಪುರುಷ, 1,02,844 ಮಹಿಳಾ, 05 ಇತರೆ ಮತದಾರರು ಇರುವರು. ನವೆಂಬರ್ 18 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ನವೆಂಬರ್ 19 ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದೆ. ನವೆಂಬರ್ 5 ರಂದು ಮತದಾನ ಹಾಗೂ ನ.9 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಅವರು ತಿಳಿಸಿದರು.
ಚುನಾವಣೆಗೆ ಸಂಬಂಧಿಸಿದ ವಿವಿಧ ಕಾರ್ಯಗಳನ್ನು ಮೇಲುಸ್ತುವಾರಿ ಮಾಡಲು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಮಾದರಿ ನೀತಿ ಸಂಹಿತೆಯನ್ನು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಾರಿಗೊಳಿಸಲು ಸೆಕ್ಟರ್ ಅಧಿಕಾರಿ, ಸಂಚಾರಿ ತಪಾಸಣೆ ದಳ, ಸ್ಥಿರ ಜಾಗೃತ ದಳ, ವಿಡಿಯೋ ವೀಕ್ಷಣಾ ತಂಡ, ತಾಲ್ಲೂಕು ಮಟ್ಟದ ಮಾದರಿ ನೀತಿ ಸಂಹಿತೆ ತಂಡಗಳು, ವಿಡಿಯೋ ವಿಚಕ್ಷಣಾ ದಳ ಹೀಗೆ ಹಲವಾರು ತಂಡಗಳನ್ನು ರಚಿಸಲಾಗಿದ್ದು, ಚುನಾವಣಾ ಕೆಲಸವನ್ನು ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿವಿಜಿಲ್ ನಿರ್ವಹಣಾ ಕೇಂದ್ರ, ಮತದಾರ ಸಹಾಯವಾಣಿ-1950 ನಿರ್ವಹಣಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ದಾಖಲಾದ ದೂರುಗಳು ಹಾಗೂ ದಾಖಲೆಗಳ ನಿರ್ವಹಣೆ, ವಿದ್ಯುನ್ಮಾನ ಮಾಧ್ಯಮ ಮತ್ತು ಎಂಸಿಎಂಸಿ ಸಮಿತಿಯ ಕಾರ್ಯನಿರ್ವಹಣೆಯ ಕೇಂದ್ರಕ್ಕೆ ಚುನಾವಣಾ ವೀಕ್ಷಕರು ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಕೆ.ಪರುಷರಾಮ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಯಾಲಕ್ಕಿಗೌಡ, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ ಹಾಗೂ ನೋಡೆಲ್ ಅಧಿಕಾರಿಗಳು ಉಪಸ್ಥಿತರಿದ್ದರು.
ಚುನಾವಣಾ ವೀಕ್ಷಕರ ನೇಮಕ: ಕೆ.ಆರ್.ಪೇಟೆ ಕ್ಷೇತ್ರದ ಉಪಚುನಾವಣೆ ಸಂಬಂಧ ಊರ್ಮಿಳಾ ಸುರೇಂದ್ರ ಶುಕ್ಲಾ ಅವರನ್ನು ಚುನಾವಣಾ ವೀಕ್ಷಕರನ್ನಾಗಿ ಭಾರತ ಚುನಾವಣಾ ಆಯೋಗ ನೇಮಕ ಮಾಡಿದೆ ಎಂದು ಮಂಡ್ಯ ಜಿಲ್ಲಾಧಿಕಾರಿಗಳಾದ ಡಾ.ಎಂ.ವಿ.ವೆಂಕಟೇಶ್ ಅವರು ತಿಳಿಸಿದ್ದಾರೆ.
ಚುನಾವಣೆ ಮುಗಿಯುವವರೆಗೆ ವೀಕ್ಷಕರು ಕೆ.ಆರ್.ಪೇಟೆ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಉಪ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರು ಹಾಗೂ ಮಾಹಿತಿಯನ್ನು ವೀಕ್ಷಕರ ದೂರವಾಣಿ ಸಂಖ್ಯೆ:9535977736 ಗೆ ನೀಡಬಹುದು ತಿಳಿಸಿದ್ದಾರೆ.