ಚಾಮರಾಜನಗರ: ಗುಂಡ್ಲುಪೇಟೆ ತಾಲೂಕು ವ್ಯಾಪ್ತಿಯಲ್ಲಿ ಹುಲಿ ದಾಳಿ ಮತ್ತೆ ಮುಂದುವರೆದಿದ್ದು, ಮೇಕೆ ಮೇಲೆ ದಾಳಿ ನಡೆಸಿ ಸಾಯಿಸಿದ ಘಟನೆ ಕಲ್ಲಿಗೌಡನಹಳ್ಳಿ ಸಮೀಪದ ಒಗರುಕಟ್ಟೆ ಬಳಿ ನಡೆದಿದೆ.
ಇದೀಗ ಹುಲಿ ಮೇಕೆ ಮೇಲೆ ದಾಳಿ ಮಾಡಿದ ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇತ್ತೀಚೆಗಷ್ಟೆ ಹುಲಿ ದಾಳಿಯಿಂದ ಇಬ್ಬರು ವ್ಯಕ್ತಿಗಳು ಹಾಗೂ ಜಾನುವಾರು ಬಲಿಯಾಗಿದ್ದು, ತಾಲೂಕಿನಲ್ಲಿ ಭಯದ ವಾತಾವರಣ ಇರುವಾಗಲೇ ಘಟನೆ ನಡೆದಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯ ವ್ಯಾಪೀಗೆ ಸೇರಿದ ಗ್ರಾಮವಾದ ಕಲ್ಲಿಗೌಡನಹಳ್ಳಿ ಗ್ರಾಮದ ಸ್ವಾಮಿ ಎಂಬುವರಿಗೆ ಸೇರಿದ ಆಡು ಕೆರೆ ಬಳಿ ಮೇಯುತ್ತಿರುವಾಗ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಇದನ್ನು ನೋಡಿದ ಸ್ವಾಮಿ ಅವರು ಕೂಗಿ ಕೊಂಡಾಗ ಹುಲಿ ಆಡನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದೆ. ಈ ಘಟನೆಯ ಬಳಿಕ ರೈತರು ಭಯಗೊಂಡಿದ್ದು, ಜಮೀನಿಗೆ ತೆರಳಲು ಭಯಪಡುತ್ತಿದ್ದಾರೆ. ಅರಣ್ಯ ಅಧಿಕಾರಿಗಳು ಇತ್ತ ಗಮನಹರಿಸಿ ಹುಲಿಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.