ನಂಜನಗೂಡು: ಕಳೆದ ಕೆಲವು ದಿನಗಳಿಂದ ಎಲ್ಲೆಂದರಲ್ಲಿ ಅಲೆದಾಡುತ್ತಾ ರೈತರ ಸಾಕು ಪ್ರಾಣಿಗಳನ್ನು ಕೊಂದು ತಿಂದು ಹಾಕುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಬೋನು ಇರಿಸಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಚಿನ್ನಂಬಳ್ಳಿ ಗ್ರಾಮದ ಜನ ಚಿರತೆಯ ಉಪಟಳದಿಂದ ಬೇಸತ್ತಿದ್ದರು, ಆಗಾಗ್ಗೆ ರೈತರ ಜಾನುವಾರು ಸೇರಿದಂತೆ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿ ಸಾಯಿಸುತ್ತಿತ್ತು. ಇದರಿಂದ ಜನ ಭಯಭೀತರಾಗಿದ್ದರು. ಈ ನಡುವೆ ಕಳೆದ ಮೂರು ದಿಗಳ ಹಿಂದೆ ತಗಡೂರು ಗ್ರಾಮದ ಗುರು ಮಲ್ಲೇಗೌಡ ಎಂಬುವರಿಗೆ ಸೇರಿದ ಐದು ಕುರಿಗಳನ್ನು ಇದೇ ಚಿರತೆ ಬಲಿ ಪಡೆದಿತ್ತು. ಜತೆಗೆ ಕಳೆದ 15 ದಿನಗಳಿಂದ ತಗಡೂರು, ಕೊಮ್ಮಗೆರೆ ಮತ್ತು ಚಿನ್ನಂಬಳಿ ಗ್ರಾಮದ ಸುತ್ತಮುತ್ತಲಿನ ಜಮೀನಿನಲ್ಲಿ ಕಾಣಿಸಿಕೊಂಡು ಜನರಲ್ಲಿ ಭೀತಿ ಹುಟ್ಟಿಸಿತ್ತು. ಚಿರತೆಗೆ ಹೆದರಿ ರೈತರು ಜಮೀನಿಗೆ ತೆರಳಲು ಭಯಪಡುವಂತಾಗಿತ್ತು.
ಚಿರತೆಯ ಉಪಟಳದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ವಲಯ ಅರಣ್ಯಾಧಿಕಾರಿ ಲೋಕೇಶ್ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಗ್ರಾಮದ ಹೊರವಲಯದಲ್ಲಿರುವ ಮಹದೇವಪ್ಪ ಎಂಬುವವರ ಜಮೀನಿನಲ್ಲಿ ಬೋನು ಇರಿಸಿ ಚಿರತೆಯನ್ನು ಸೆರೆ ಹಿಡಿಯಲು ಮುಂದಾಗಿದ್ದರು
ಬುಧವಾರ ತಡರಾತ್ರಿ ಅರಣ್ಯ ಇಲಾಖೆಯ ಇರಿಸಿದ್ದ ಬೋನಿಗೆ ಚಿರತೆ ಬಂದು ಬಿದ್ದಿದೆ. ಗುರುವಾರ ಬೆಳಿಗ್ಗೆ ಜಮೀನಿಗೆ ತೆರಳಿದವರಿಗೆ ಬೋನಿನಲ್ಲಿ ಚಿರತೆ ಸೆರೆಯಾಗಿರುವುದು ಕಾಣಿಸಿದ್ದು ಇದರಿಂದ ರೈತರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
ಈ ವೇಳೆ ಸ್ಥಳಕ್ಕೆ ಉಪ ಅರಣ್ಯಾಧಿಕಾರಿ ಶಶಿಕುಮಾರ್, ಪುಟ್ಟರಾಜು ಮೊದಲಾದವರು ಭೇಟಿ ನೀಡಿದ್ದರು.