ಮೈಸೂರು: ಶಾಸಕ ತನ್ವೀರ್ ಸೇಠ್ ಅವರ ಹತ್ಯಾ ಯತ್ನದ ಘಟನೆ ನಡೆದ ಬಳಿಕ ಇಡೀ ಮೈಸೂರು ನಗರ ಬೆಚ್ಚಿ ಬಿದ್ದಿದೆ. ಅಷ್ಟೇ ಅಲ್ಲ ಇವತ್ತು ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಆರೋಪಿಯನ್ನು ವಿಚಾರಣೆ ನಡೆಸಿದ ವೇಳೆ ಒಂದಷ್ಟು ಹಿಂದೂ ಮುಖಂಡರು ಅವರ ಲೀಸ್ಟ್‍ನಲ್ಲಿದ್ದರು ಎಂಬುವುದು ಆತಂಕಕಾರಿಯಾಗಿದೆ.
ಇಷ್ಟಕ್ಕೂ ಇವತ್ತು ಶಾಸಕ ತನ್ವೀರ್ ಸೇಠ್ ಮೇಲೆ ಹತ್ಯಾ ಯತ್ನ ನಡೆಸಿರುವ ಆರೋಪಿ ಫರ್ಹಾನ ಪಾಷಾ ಮತ್ತು ಆತನ ತಂಡದ ಉದ್ದೇಶಗಳೇ ಅಚ್ಚರಿಗೆ ಕಾರಣವಾಗಿದೆ. ಒಂದಷ್ಟು ಮಂದಿಯನ್ನು ಮುಗಿಸಿ ತಮ್ಮ ಪ್ರಾಬಲ್ಯ ಸಾಧಿಸುವ ಮೂಲಕ ತಮ್ಮ ಸಂಘಟನೆಯನ್ನು ಬೆಳೆಸುವ ಉದ್ದೇಶ ಅವರದ್ದಾಗಿತ್ತು. ಧರ್ಮಾಂಧ ಕಾರ್ಯದಲ್ಲಿ ನಿರತರಾಗಿದ್ದ ಅವರು ಒಂದಷ್ಟು ಮಂದಿಯ ಲೀಸ್ಟ್ ತಯಾರಿಸಿಟ್ಟುಕೊಂಡು ಅವರನ್ನು ಮುಗಿಸಲು ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಂಡಿದ್ದರು ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ನವೆಂಬರ್ 17ರಂದು ನಡೆಯುತ್ತಿದ್ದ ಮದುವೆಯ ಆರತಕ್ಷತೆ ಸಮಾರಂಭದಲ್ಲಿ ತನ್ವೀರ್ ಸೇಠ್ ಅವರ ಮೇಲೆ ಮಚ್ಚು ಬೀಸಿ ಓಡಿದ್ದ ಫರ್ಹಾನ ಪಾಷಾ ಸಾರ್ವಜನಿಕರ ಸಮಯಪ್ರಜ್ಞೆಯಿಂದ ಸಿಕ್ಕಿ ಬಿದ್ದಿದ್ದ. ಅವನನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ ಪೊಲೀಸರಿಗೆ ಅವನ ಹಿಂದೆ ಹಲವರು ಇದ್ದಾರೆ ಎಂಬುದು ಗೊತ್ತಾಗಿತ್ತು. ಕೃತ್ಯ ನಡೆಸುವ ದಿನ ಆತ ಯಾರೊಂದಿಗೆ ಮೊಬೈಲ್ ಸಂಪರ್ಕದಲ್ಲಿದ್ದ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಹಾಕಿದ್ದರಲ್ಲದೆ, ಒಂದಷ್ಟು ಮಂದಿಯನ್ನು ಎತ್ತಾಕಿಕೊಂಡು ಬಂದು ವಿಚಾರಣೆ ನಡೆಸಿದ್ದರು. ಆತ ನೀಡಿದ ಖಚಿತ ಮಾಹಿತಿಯಂತೆ ಇದೀಗ ಅಕ್ರಂ, ಅಬೀದ್ ಪಾಷಾ, ನೂರ್ ಖಾನ್, ಮುಜೀಬ್ ಹಾಗು ಮುಜಾಮಿಲ್ ಎಂಬ ಐದು ಮಂದಿಯನ್ನು ಬಂಧಿಸಲಾಗಿದೆ.
ಆರೋಪಿ ಫರ್ಹಾನ ಪಾಷಾ ಸಂಘಟನೆಯೊಂದರ ಕಾರ್ಯಕರ್ತನಾಗಿದ್ದ ಎಂಬುದು ದೃಢವಾಗಿದೆ. ಆತ ಇತರೆ ಸಹಚರರೊಂದಿಗೆ ಸೇರಿ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಎಂಬುದು ಕೂಡ ಬಹಿರಂಗವಾಗಿದೆ. ಸದ್ಯಕ್ಕೆ ಆತ ಯಾವ ಸಂಘಟನೆಯಲ್ಲಿದ್ದ ಎಂಬುದು ತನಿಖೆಯ ಬಳಿಕವಷ್ಟೆ ಬಯಲಿಗೆ ಬರಬೇಕಾಗಿದೆ. ಯಾವಾಗ ಫರ್ಹಾನ ಪಾಷಾ ಸಿಕ್ಕಿ ಬಿದ್ದನೋ ಕೆಲವು ಸಂಘಟನೆಗಳ ಮುಖಂಡರು ತಮಗೂ ಅವನಿಗೂ ಸಂಬಂಧವಿಲ್ಲ ಎಂದು ಹೇಳುತ್ತಾ ಜಾಣತನ ತೋರುತ್ತಿದ್ದಾರೆ.
ಸಿಕ್ಕಿ ಬಿದ್ದ ಫರ್ಹಾನ ಪಾಷಾ ಮತ್ತು ಸಹಚರರು ಹಿಂದೂ ಮುಖಂಡ ಗಿರಿಧರ್ ಸೇರಿದಂತೆ ಹಲವು ಮುಖಂಡರನ್ನು ಮುಗಿಸುವ ಸಂಚು ರೂಪಿಸಿದ್ದರು. ಈಗ ಬಂಧಿಸಲ್ಪಟ್ಟಿರುವ ಆರು ಮಂದಿ ಪೈಕಿ ಅಬಿದ್ ಪಾಷಾ ಎಂಬಾತ ಈ ಹಿಂದೆ ನಡೆದ ಆರ್ ಎಸ್ ಎಸ್ ಕಾರ್ಯಕರ್ತ ಕ್ಯಾತಮಾರನಹಳ್ಳಿ ರಾಜು ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲಿನಲ್ಲಿದ್ದು ಬಂದವನು ಎಂದು ಹೇಳಲಾಗಿದೆ.
ಆದರೆ ಈತನೇ ಶಾಸಕ ತನ್ವೀರ್ ಸೇಠ್ ಅವರ ಕೊಲೆ ಯತ್ನದ ಹಿಂದಿನ ಮಾಸ್ಟರ್ ಮೈಂಡ್ ಎಂಬುದೇ ಅಚ್ಚರಿಯ ಸಂಗತಿಯಾಗಿದೆ. ಹಾಗಾದರೆ ತನ್ವೀರ್ ಸೇಠ್ ಮುಗಿಸಲು ಈ ತಂಡ ಏಕೆ ಪ್ಲಾನ್ ಮಾಡಿತ್ತು ಎಂಬುದೇ ಅಚ್ಚರಿಗೆ ಕಾರಣವಾಗಿದೆ.
ಮೂಲಗಳ ಪ್ರಕಾರ ಎನ್.ಆರ್.ಕ್ಷೇತ್ರದಲ್ಲಿ ಶಾಸಕ ತನ್ವೀರ್ ಸೇಠ್‍ಗೆ ಪ್ರತಿಸ್ಪರ್ಧಿ ಬೇರೆ ಯಾರೂ ಇರಲಿಲ್ಲ. ಹೀಗಾಗಿ ಅವರನ್ನು ಮುಗಿಸದಿದ್ದರೆ ತಾವು ರಾಜಕೀಯವಾಗಿ ಬೆಳೆಯಲು ಮತ್ತು ತಮ್ಮ ಸಂಘಟನೆಯನ್ನು ಬೆಳೆಸಲು ಸಾಧ್ಯವಿಲ್ಲ ಎಂಬುದು ಅವರ ಧೋರಣೆಯಾಗಿತ್ತು. ಜತೆಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯವೂ ಈ ಕೃತ್ಯಕ್ಕೆ ಪ್ರಚೋದನೆ ನೀಡಿತ್ತು. ಹೀಗಾಗಿಯೇ ಅವರು ಹಲವು ದಿನಗಳಿಂದ ಕೃತ್ಯ ಎಸಗಲು ಹೊಂಚು ಹಾಕಿದ್ದರಾದರೂ ಅದರಲ್ಲಿ ವಿಫಲರಾಗಿದ್ದರು.
ಕೃತ್ಯ ನಡೆಯುವ ಕೆಲವು ದಿನಗಳ ಹಿಂದೆ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ಕೋರಿ ಮುಡಾ ಬಳಿ ಧರಣಿ ಪ್ರತಿಭಟನೆ ನಡೆಸಿದ್ದ ತನ್ವೀರ್ ಸೇಠ್ ಅವರೊಂದಿಗೆ ಆರೋಪಿ ಫರ್ಹಾನ್ ಪಾಷಾ ಹಾಜರಿದ್ದ ಎಂಬುದು ಬೆಳಕಿಗೆ ಬಂದಿದೆ.
ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವುದಕ್ಕೂ ಮುನ್ನ ಫರ್ಹಾನ್ ಪಾಷಾನಿಗೆ ವ್ಯವಸ್ಥಿತವಾಗಿ ತರಬೇತಿ ನೀಡಲಾಗಿತ್ತೆಂಬ ಅಂಶ ಪೆÇಲೀಸರ ತನಿಖೆ ವೇಳೆ ಗೊತ್ತಾಗಿದೆ. ದಾಳಿ ನಡೆಸಿದ ವೀಡಿಯೋ ದೃಶ್ಯಾವಳಿಗಳನ್ನು ಪರಿಶೀಲಿಸಿರುವ ತನಿಖಾಧಿಕಾರಿಗಳು, ಯಾವುದೇ ತರಬೇತಿ ಇಲ್ಲದೇ ಈ ರೀತಿ ದಾಳಿ ನಡೆಸಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಫರ್ಹಾನ್ ಪಾಷಾ ಸೇರಿದಂತೆ ಆತನ ತಂಡ ತನ್ವೀರ್ ಸೇಠ್ ಮೇಲೆ ದಾಳಿ ಮಾಡುವ ಮುನ್ನ ಇಡೀ ತಂಡವೇ ತರಬೇತಿ ಪಡೆದಿತ್ತು. ಇದಕ್ಕಾಗಿ ನಾಯಿಗಳ ಕತ್ತು ಕತ್ತರಿಸಿ ಅಭ್ಯಾಸ ಮಾಡುತ್ತಿದ್ದರು. ನಾಯಿ ಕುತ್ತಿಗೆ ಭಾಗ ಮನುಷ್ಯನ ಕುತ್ತಿಗೆಗಿಂತ ಗಟ್ಟಿಯಾಗಿದ್ದು, ಇದೇ ಕಾರಣದಿಂದ ನಾಯಿಗಳ ಕುತ್ತಿಗೆ ಕತ್ತರಿಸಿ ಅಭ್ಯಾಸ ಮಾಡಿಕೊಂಡಿದ್ದರು ಎಂಬ ಭಯಾನಕ ಸತ್ಯವೂ ಹೊರಬಿದ್ದಿದೆ.
ಇದೆಲ್ಲದರ ನಡುವೆ ಫರ್ಹಾನ್ ಪಾಷಾ ಪದೇ ಪದೇ ಫೋನ್ ಕರೆ ಮಾಡಿದ ಹಾಗೂ ಹೆಚ್ಚಿನ ಸಮಯ ಮಾತನಾಡಿರುವವರ ಸಂಖ್ಯೆ ಪತ್ತೆ ಹಚ್ಚಿ ಅನುಮಾನ ಬಂದವರನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸುವ ಕಾರ್ಯ ಮುಂದುವರೆದಿದೆ.
ಸದ್ಯ ಶಾಸಕ ತನ್ವೀರ್ ಸೇಠ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು ಐಸಿಯುನಿಂದ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದೆ. ಅವರ ಕಿವಿಗೆ ಹಾನಿಯಾಗಿದ್ದು ಪ್ಲಾಸ್ಟಿಕ್ ಸರ್ಜರಿ ಮಾಡಲಾಗುತ್ತಿದೆ. ಘಟನೆ ಬಳಿಕ ಅವರಿಗೆ ರಾಜ್ಯ ಸರ್ಕಾರ ಮೂರು ಪಟ್ಟು ಭದ್ರತೆಯನ್ನು ಹೆಚ್ಚಿಸಿದೆ.