ರಾಮನಗರ: ಜಿಲ್ಲೆಯಲ್ಲಿರುವ ಇರುಳಿಗರ ಕಾಲೋನಿಗಳನ್ನು ಪ್ರವಾಸಿ ತಾಣಗಳಾಗಿ ಪರಿವರ್ತಿಸಿ ಉದ್ಯೋಗ ಸೃಷ್ಟಿಗೆ ಕ್ರಮ ವಹಿಸಲಾಗುವುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಎಸ್.ಶಂಕರಪ್ಪ ತಿಳಿಸಿದ್ದಾರೆ.
ಸರ್ಕಾರಿ ಕಾರ್ಯಕ್ರಮಗಳ ಮಾಹಿತಿಯನ್ನು ಜನರ ಮನೆ ಬಾಗಿಲಿಗೆ ತಲುಪಿಸಿ ಅರಿವು ಮೂಡಿಸಲು ರಾಮನಗರ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕನಕಪುರ ಬಳಿಯ ಕೂತಗಾನಹಳ್ಳಿ ಇರುಳಿಗರ ಕಾಲೋನಿಯಲ್ಲಿ ಹಮ್ಮಿಕೊಂಡಿದ್ದ ವಿನೂತನ ಕಾರ್ಯಕ್ರಮ ‘ಗ್ರಾಮ ಸೇವೆ’ಗೆ ಚಾಲನೆ ನೀಡಿ ಅಲ್ಲಿಯೇ ರಾತ್ರಿ ವಾಸ್ತವ್ಯ ಹೂಡಿ ಅವರು ಮಾತನಾಡಿದರು.
ಬೆಂಗಳೂರಿಗೆ ಹೊಂದಿಕೊಂಡಿರುವ ರಾಮನಗರ ಜಿಲ್ಲೆಯ ಅರಣ್ಯಗಳ ಅಂಚಿನಲ್ಲಿ ಇರುಳಿಗರು ವಾಸಿಸುವ 80ಕ್ಕೂ ಹೆಚ್ಚು ಕಾಲೋನಿಗಳಿದ್ದು ಅವರ ಕಲೆ ಸಂಸ್ಕøತಿ ಅರಿತು ಪಕ್ಕದಲ್ಲೆ ಇರುವ ಬೆಟ್ಟಗುಡ್ಡಗಳಲ್ಲಿ ಪ್ರವಾಸಿಗರು ಚಾರಣ ಮಾಡಬಹುದಾಗಿದೆ. ಇರುಳಿಗರ ಜೊತೆಯಲ್ಲೇ ಭೋಜನ ವ್ಯವಸ್ಥೆ ಸಹ ಮಾಡಿಸಿ ಸಂಸ್ಕೃತಿ ವಿನಿಮಯಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
ಇರುಳಿಗರ ಕಾಲೋನಿಗಳಲ್ಲಿ ಪ್ರವಾಸಿ ಮೂಲಸೌಲಭ್ಯ ಒದಗಿಸಲು ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪ್ರವಾಸೋದ್ಯಮ ಸಚಿವರಾದ ಸಿ.ಟಿ. ರವಿ ಅವರು ಗ್ರಾಮ ಪ್ರವಾಸೋದ್ಯಮಕ್ಕೆ ಅಗತ್ಯ ಕ್ರಮ ವಹಿಸುವಂತೆ ರಾಮನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸೂಚಿಸಿದ್ದಾರೆ ಎಂದರು.
ಪ್ರವಾಸಿ ತಾಣಗಳಾಗಿ ಇರುಳಿಗರ ಕಾಲೊನಿಗಳು ಮಾರ್ಪಾಡಾದರೆ ಸ್ಥಳಿಯರಿಗೆ ಉದ್ಯೋಗವಕಾಶಗಳು ಲಭ್ಯವಾಗಲಿವೆ. ಇದಕ್ಕೆ ಸ್ಥಳೀಯರ ಸಹಕಾರವೂ ಮುಖ್ಯ. ಇಲ್ಲಿ ರೆಸಾರ್ಟ್‍ಗಳಿಗೆ ಸರಿಸಮಾನವಾದ ಪ್ರಕೃತಿ ಒಡಲಿನಲ್ಲಿ ಗ್ರಾಮಗಳ ಮೂಲಕ ಪ್ರವಾಸಿಗರನ್ನು ಸೆಳೆಯಲಾಗುವುದು.
ಯುವ ಸಮೂಹ ಗ್ರಾಮಗಳ ಅಭಿವೃದ್ಧಿಗೆ ಪಣ ತೊಡಬೇಕು. ಒಂದೊಂದು ತಂಡಗಳನ್ನಾಗಿ ರೂಪಿಸಿಕೊಂಡು ಪ್ರವಾಸಿಗರಿಗೆ ಸಲಹೆ ಸಹಕಾರ ನೀಡಬೇಕು. 5 ಸ್ಟಾರ್ ಹೋಟೆಲ್ ಸಂಸ್ಕೃತಿ ಕಡಿಮೆಯಾಗುತ್ತಿದೆ. ಹೀಗಾಗಿ, ಹಳ್ಳಿಗಳ ಕಲೆ, ಸೊಗಡು ಅನಾವರಣಗೊಳ್ಳಬೇಕು. ಪ್ರವಾಸೋದ್ಯಮದ ಮೂಲಕ ಸ್ವಯಂ ಉದ್ಯೋಗಕ್ಕೆ ಮುಂದಾಗಬೇಕು. ಈ ಮೂಲಕ ಆದಾಯ ವೃದ್ಧಿಗೂ ಮುಂದಾಗಬೇಕು ಎಂದು ಸಲಹೆ ನೀಡಿದರು.
ಇರುಳಿಗರು ಮದ್ಯ ಸೇರಿದಂತೆ ಇನ್ನಿತರ ಚಟಗಳಿಂದ ದೂರ ಉಳಿಯಬೇಕು. ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ಸಂವಾದ ನಡೆಸಿ ಸರ್ಕಾರಿ ಕಾರ್ಯಕ್ರಮಗಳ ಮಾಹಿತಿಯನ್ನು ಮನೆ ಮನೆಗೆ ತಲುಪಿಸಲು ರಜೆ ದಿನವಾದ ತಿಂಗಳ ನಾಲ್ಕನೇ ಶನಿವಾರವನ್ನು ಮುಡುಪಾಗಿಡಲಾಗುವುದು. ಅಂದು ರಜೆ ಬಳಸದೇ ಗ್ರಾಮ ಸೇವೆ ಮಾಡಲಾಗುವುದು ಎಂದು ಹೇಳಿದರು.
ಇರುಳಿಗ ಸಮುದಾಯದ ಮುಖಂಡ ಕೃಷ್ಣಮೂರ್ತಿ ಮಾತನಾಡಿ, ಯಾವುದೇ ಇಲಾಖೆ ಇರುಳಿಗರ ಮನೆಬಾಗಿಲಿಗೆ ಬಂದಿರುವುದು ಇದೇ ಮೊದಲು. ಸಮಾಜ ಕಲ್ಯಾಣ ಇಲಾಖೆಗೆ ಅನೇಕ ಭಾರಿ ಮನವಿ ಮಾಡಿದರೂ ಯಾರೊಬ್ಬರು ಬಂದಿರಲಿಲ್ಲ. ವಾರ್ತಾ ಇಲಾಖೆ ಉಪನಿರ್ದೇಶಕ ಎಸ್. ಶಂಕರಪ್ಪ ಅವರ ಜನಪರ ಕಾಳಜಿಯಿಂದಾಗಿ ಈ ಕಾರ್ಯಕ್ರಮ ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮಪಂಚಾಯ್ತಿ ಅಭಿವೃದ್ದಿ ಅಧಿಕಾರಿ ದೊಡ್ಡಲಿಂಗಯ್ಯ ಮಾತನಾಡಿ, ಇಲ್ಲಿನ ನಿವಾಸಿಗಳಿಗೆ ಜಮೀನಿನ ಹಕ್ಕು ಪತ್ರವೇ ಇರಲಿಲ್ಲ. ಅರಣ್ಯ ಹಕ್ಕು ಸಮಿತಿ ಮೂಲಕ ಸಭೆ ನಡೆಸಿ, ಉಳುಮೆ ಮಾಡುವವ 43ಮಂದಿಯ ಪೈಕಿ 27ಮಂದಿಗೆ ಹಕ್ಕು ಪತ್ರ ವಿವರಿಸಲಾಗಿದೆ. ಅರಣ್ಯ ಇಲಾಖೆ ಒಕ್ಕಲೇಬ್ಬಿಸಿದ್ದ ಸಂಬಂಧ ಎ.ಸಿ.ಕೋರ್ಟ್ ನಲ್ಲಿ ಪ್ರಕರಣ ನಡೆಯುತ್ತಿದೆ ಎಂದು ತಿಳಿಸಿದರು.
ಇರುಳಿಗರ ಕಾಲೊನಿಯಲ್ಲಿ ಶನಿವಾರ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮೊದಲಿಗೆ ಗ್ರಾಮದ ಬೀದಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯಿತು. ಕಳೆ ತೆಗೆದು ಸ್ವಚ್ಛಗೊಳಿಸುವ ಮೂಲಕ ನೈರ್ಮಲ್ಯದ ಅರಿವಿನ ಪಾಠ ಹೇಳಲಾಯಿತು.
ಗ್ರಾಮದ ಜನರಿಗಾಗಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಡಾ.ಭಾಗ್ಯಲಕ್ಷ್ಮಿ ನೇತೃತ್ವದಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯರು ಜನರ ತಪಾಸಣೆ ಮಾಡಿ ಅಗತ್ಯ ಔಷದೋಪಚಾರದ ಸಲಹೆ ನೀಡಿದರು. ಜತೆಗೆ ಕಾಲೊನಿಯಲ್ಲಿಯೇ ಇದ್ದು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸುನಿತಾ, ರಕ್ಷಿತಾ, ಕವಿತಾ, ಸಹನಾ ಅವರನ್ನು ಅಭಿನಂದಿಸಲಾಯಿತು.
ಮನೋರಂಜನೆಯ ಮೂಲಕ ಜನರ ಮನ ತಲುಪುವ ಪ್ರಯತ್ನವನ್ನು ಅಧಿಕಾರಿಗಳು ಮಾಡಿದರು. ಬೀದಿ ನಾಟಕಗಳ ಮೂಲಕ ಅವರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಯಿತು. ಇದಲ್ಲದೆ ಹಾಡು-ನೃತ್ಯ ಕಾರ್ಯಕ್ರಮಗಳೂ ನಡೆದವು. ಶೌಚಾಲಯಗಳ ನಿರ್ಮಾಣದ ಅಗತ್ಯತೆ, ಮದ್ಯಪಾನದಿಂದ ಆದ ದುಷ್ಪರಿಣಾಮಗಳ ಬಗ್ಗೆ ಕರಪತ್ರಗಳನ್ನು ಹಂಚುವ ಜೊತೆಗೆ ಮಾತಿನ ಮೂಲಕವೂ ತಿಳಿ ಹೇಳಲಾಯಿತು.
ಸೋಮೆಂದ್ಯಾಪನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀ, ಉಪಾಧ್ಯಕ್ಷೆ ಅನಿತಾ, ಸದಸ್ಯೆ ಗಿರಿಜಮ್ಮ ಗ್ರಾಮದ ಡಾ. ಕೃಷ್ಣಮೂರ್ತಿ, ಶ್ರೀನಿವಾಸ್ ಸೇರಿದಂತೆ ಕಾಲೋನಿ ಮುಖಂಡರು ಹಾಗೂ ವಾರ್ತಾ ಇಲಾಖೆಯ ಯೋಗೇಶ್ ಗೌಡ ಹಾಗೂ ಸಿಬ್ಬಂದಿ ಇದ್ದರು.