ಚಾಮರಾಜನಗರ: ಸರ್ಕಾರದಿಂದ ಅದೆಷ್ಟೋ ಯೋಜನೆಗಳು ಬಿಡುಗಡೆಯಾಗಿದ್ದರೂ ಅದ್ಯಾವುದೂ ಇಲ್ಲಿ ಅನುಷ್ಠಾನಗೊಂಡಿಲ್ಲ ಎಂಬುದಕ್ಕೆ ಗುಂಡ್ಲುಪೇಟೆ ತಾಲೂಕಿನ ಕಣಿಯನಪುರ ಸೋಲಿಗರ ಕಾಲೋನಿ ಸಾಕ್ಷಿಯಾಗಿದೆ. ಇಲ್ಲಿನವರ ಬದುಕನ್ನು ನೋಡಿದರೆ ಅದು ಅರ್ಥವಾಗಿ ಬಿಡುತ್ತದೆ. ಇಲ್ಲಿ ಸೋಲಿಗರು ವಾಸ ಮಾಡುತ್ತಿದ್ದು, ಅವರ ಬದುಕು ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದಿದ್ದರೂ ಮೂಲಭೂತ ಸೌಕರ್ಯಗಳಿಲ್ಲದೆ, ಆದಿ ಮಾನವರಂತೆ ಬದುಕು ಸಾಗಿಸುತ್ತಿರುವುದು ತುಕ್ಕು ಹಿಡಿದ ನಮ್ಮ ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿದೆ.
ಪ್ರತಿ ಸರ್ಕಾರಗಳು ಅಧಿಕಾರಕ್ಕೆ ಬಂದಾಗಲೆಲ್ಲ ನಾಯಕರು ಕೋಟ್ಯಂತರ ರೂ.ಗಳ ಯೋಜನೆಗಳ ಕುರಿತಂತೆ ಪುಂಖಾನುಪುಂಖವಾಗಿ ಭಾಷಣ ಬಿಗಿಯುತ್ತಲೇ ಬರುತ್ತಿದ್ದಾರೆ. ಆದರೆ ಯೋಜನೆಗಳು ಮಾತ್ರ ಇಲ್ಲಿಗೆ ತಲುಪಿದಂತೆ ಕಾಣುತ್ತಿಲ್ಲ.
ಹಾಗೆ ನೋಡಿದರೆ, ಕಣಿಯನಪುರ ಕಾಲೋನಿಯು ಗುಂಡ್ಲುಪೇಟೆ ತಾಲೂಕು ಕೇಂದ್ರದಿಂದ ಕೇವಲ 25 ಕಿಮೀ ದೂರದಲ್ಲಿದ್ದು, ಬಂಡೀಪುರ ಅರಣ್ಯ ವ್ಯಾಪ್ತಿಗೆ ಹೊಂದಿಕೊಂಡಂತಿದೆ. ಇಲ್ಲಿ 80 ಮನೆಗಳು ಇದ್ದು ಸುಮಾರು 130 ಮಂದಿ ಮತದಾರರು ಇದ್ದಾರೆ ಇವರೆಲ್ಲರೂ ರಸ್ತೆ, ನೀರು, ವಿದ್ಯುತ್ ಇಲ್ಲದೆ ಪ್ರಾಣಿಗಳಿಗಿಂತ ಕಡೆಯಾಗಿ ಬದುಕುತ್ತಿರುವುದು ಬೇಸರದ ಸಂಗತಿಯಾಗಿದೆ. ಇಲ್ಲಿ ನೆಲೆಸಿರುವ ಜನರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡಿ ಅದರಿಂದ ಬರುವ ಆದಾಯದಲ್ಲಿ ಜೀವನ ನಡೆಸುತ್ತಿದ್ದಾರೆ.
ಸರ್ಕಾರದಿಂದ ಬುಡಕಟ್ಟು ಜನಾಂಗದವರ ಅಭಿವೃದ್ಧಿಗೆ ಕೋಟಿ ಕೋಟಿ ಹಣ ಹರಿದು ಬಂದರೂ ಇಲ್ಲಿಗೆ ಯಾವ ಯೋಜನೆಗಳು ತಲುಪಿದಂತೆ ಕಂಡು ಬರುತ್ತಿಲ್ಲ. ಏಕೆಂದರೆ ಅದನ್ನು ಅವರ ಬದುಕೇ ಹೇಳುತ್ತಿದೆ. ಗುಡಿಸಲಲ್ಲೇ ಬದುಕುವ ಇಲ್ಲಿನ ಜನ ಸುರಿಯುವ ಮಳೆ, ಬೀಸುವ ಗಾಳಿ, ಚಳಿಗೆ ಮೈಯೊಡ್ಡಿ ಬದುಕು ಸಾಗಿಸುವಂತಾಗಿದೆ.
ಇನ್ನು ಇಲ್ಲಿಂದ ಶಾಲೆಗೆ ತೆರಳಲು ಮಕ್ಕಳಿಗೆ ಸಮರ್ಪಕವಾದ ರಸ್ತೆಯಿಲ್ಲ. ಹೀಗಾಗಿ ಸಾರಿಗೆ ಸಂಪರ್ಕ ಮರೀಚಿಕೆಯಾಗಿದೆ. ಇರುವ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು ಹಾಡಿಯಲ್ಲಿ ಯಾರಾದರು ಅನಾರೋಗ್ಯಕ್ಕೀಡಾದರೆ ಆ ರಸ್ತೆಯಲ್ಲಿ ಬರುವ ತನಕ ಆಯುಷ್ಯ ಗಟ್ಟಿ ಇದ್ದರೆ ಮಾತ್ರ ಬದುಕುತ್ತಾರಷ್ಟೆ. ಇಲ್ಲಿಗೆ ವಿದ್ಯುತ್ ಇನ್ನೂ ಬಂದಿಲ್ಲ. ಜತೆಗೆ ಕಾಡು ಪ್ರಾಣಿಗಳ ಹಾವಳಿಯೂ ಹೆಚ್ಚಾಗಿದ್ದು ಜೀವ ಕೈನಲ್ಲಿ ಹಿಡಿದುಕೊಂಡು ಜೀವನ ಸಾಗಿಸುವಂತಾಗಿದೆ.
ಚುನಾವಣೆ ಬಂದಾಗ ಮಾತ್ರ ಕೆಲವರು ಹಣ ಹೆಂಡ ನೀಡಿ ಮತ ಹಾಕಿಸಿಕೊಳ್ಳುವ ರಾಜಕಾರಣಿಗಳು ಆ ನಂತರ ಈ ಕಡೆ ತಿರುಗಿ ನೋಡುವುದಿಲ್ಲ. ಅವರ ಕಷ್ಟ ಸುಖ ವಿಚಾರಿಸುವುದಿಲ್ಲ. ಅವರ ಗೋಳು ಅರಣ್ಯ ರೋದನವಾಗಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಇವರಿಗೊಂದು ಒಳ್ಳೆಯ ಬದುಕು ಕಲ್ಪಿಸಿಕೊಡಬೇಕಾಗಿದೆ.