ಕಾರವಾರ: ಪ್ರೀಂ ಕೋರ್ಟಿನ ಅನರ್ಹತೆಯ ಆದೇಶಕ್ಕೆ ಜನತೆ ಮುದ್ರೆ ಹಾಕಿ ಅನರ್ಹರನ್ನು ಮನೆಗೆ ಕಳುಹಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರಕ್ಕೆ ಒಳಪಡುವ ಕಿರವತ್ತಿಯಲ್ಲಿ ಕಾಂಗ್ರೆಸ ಅಭ್ಯರ್ಥಿ ಪರ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಪಕ್ಷಾಂತರ ಒಂದು ರೋಗ. ಆಪರೇಷನ್ ಕಮಲದ ಪಿತಾಮಹ ಮಿಸ್ಟರ್ ಯಡಿಯೂರಪ್ಪ, ಕಾಂಗ್ರೆಸ್ಸಿನಲ್ಲಿದ್ದ ಶಿವರಾಮ್ ಹೆಬ್ಬಾರ್ ಅವರನ್ನು ಮಂತ್ರಿ ಪದವಿಯ ಆಸೆ ತೋರಿಸಿ ಬಿಜೆಪಿಗೆ ಕರೆಸಿಕೊಂಡಿದ್ದಾರೆ. ರಾಜಕೀಯ ಶುದ್ಧಿಕರಣಕ್ಕಾಗಿ ಜನರೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ನೆರೆ ಹಾವಳಿಯ ಸಂದರ್ಭದಲ್ಲಿ ಜನರ ಸಮಸ್ಯೆ ಬಗೆಹರಿಸಲು ಬಂದಿಲ್ಲ. ಈ ಮತಯಾಚನೆಗೆ ಬಂದಿದ್ದಾರೆ. ಬಿಜೆಪಿ ಸರ್ಕಾರ ಹಾಲಿನ ಪರಿಹಾರಧನ ಕೊಟ್ಟಿಲ್ಲ, ಅನ್ನಭಾಗ್ಯದ ಅಕ್ಕಿಯ ಪ್ರಮಾಣ ಕಡಿಮೆ ಮಾಡಿದ್ದು ನಾಚಿಕೆಗೇಡಿನ ಸಂಗತಿಯಾಗಿದ್ದು ಈ ಚುನಾವಣೆ ನಂತರ ಬಿಜೆಪಿ ಸರ್ಕಾರ ಹೋಗಿ ಮಧ್ಯಂತರ ಚುನಾವಣೆ ಬರಲಿದೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.
ಮಾಜಿ ಸಚಿವ ಆರ್. ವಿ. ದೇಶಪಾಂಡೆ ಮಾತನಾಡಿ, ಉಪಚುನಾವಣೆಗೆ ತಗುಲುವ ವೆಚ್ಚವನ್ನು ಅಭಿವೃದ್ಧಿಗೆ ಬಳಸಬಹುದಿತ್ತು. 17 ಶಾಸಕರಿಗೆ ಅಂಟಿದ ಅನರ್ಹ ಹಣೆಪಟ್ಟಿಯನ್ನು ಯಾರಿಂದಲೂ ತೆಗೆಯಲು ಸಾಧ್ಯವಿಲ್ಲ. ಅನರ್ಹರಿಗೆ ಯಾವ ರೀತಿಯ ಶಿಕ್ಷೆ ನೀಡಬೇಕು ಎಂಬುದನ್ನು ಜನ ಚಿಂತನೆ ಮಾಡಬೇಕು. ಹಿಂದಿನ ಚುನಾವಣೆಯಲ್ಲಿ ಹೆಬ್ಬಾರ ಪರ ಮತ ಕೇಳಲು ಬಂದಿದ್ದೆ. ಈಗ ಅವರಿಗೆ ಮತ ಹಾಕಲು ಹೇಳಿದ್ದಕ್ಕಾಗಿ ಕ್ಷಮೆ ಕೇಳಲು ಬಂದಿದ್ದೇನೆ. ಅವರ ವರ್ತನೆ ಬೇಸರ ತಂದಿದೆ. ಸಾವಿರಾರು ಕೋಟಿ ಅನುದಾನ ತಂದಿದ್ದೇನೆ ಎಂದು ಹೆಬ್ಬಾರ್ ಹೇಳುತ್ತಾರೆ, ಆದರೆ ಅದು ಏನಾಯಿತು ಎಂದು ಪ್ರಶ್ನಿಸಿದರು.
ಉಪಚುನಾವಣೆಯ 15 ಅಭ್ಯರ್ಥಿಗಳು ಈಗಾಗಲೇ ಗೆದ್ದಿದ್ದಾರೆಂದು ಪ್ರಚಾರಕ್ಕೆ ಹೋದಲ್ಲಿ ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಅಷ್ಟು ವಿಶ್ವಾಸವಿದ್ದರೆ ಅವರು ಪ್ರಚಾರಕ್ಕೆ ಬರುವುದೇಕೆ ಎಂದು ಲೇವಡಿ ಮಾಡಿದರು. ಸಿದ್ದರಾಮಯ್ಯ ಸರ್ಕಾರ ನೀಡಿದ ಅನುದಾನಗಳನ್ನು ಈಗ ತನ್ನ ಸಾಧನೆ ಎಂದು ಹೆಬ್ಬಾರ ಹೇಳಿಕೊಳ್ಳುತ್ತಿದ್ದಾರೆ. ಪ್ರವಾಹ ಬಂದು ಜನ ಸಂಕಷ್ಟದಲ್ಲಿದ್ದಾಗ ಜನಪ್ರತಿನಿಧಿಗಳು ಜನರ ಮಧ್ಯದಲ್ಲಿರಬೇಕು. ಆದರೆ ಈ ಭಾಗದ ಶಾಸಕರಾಗಿದ್ದ ಶಿವರಾಮ್ ಹೆಬ್ಬಾರ ರಾಜೀನಾಮೆ ಕೊಟ್ಟು ಮುಂಬಯಿನಲ್ಲಿ ಕುಳಿತಿದ್ದರು ಎಂದು ಟೀಕಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ, ಮಾಜಿ ಶಾಸಕರಾದ ಜೆ. ಡಿ. ನಾಯ್ಕ, ಸತೀಶ ಸೈಲ್, ಎಐಸಿಸಿ ಪ್ರತಿನಿಧಿ ವಂಶಿಕೃಷ್ಣ ರೆಡ್ಡಿ, ಕೆಪಿಸಿಸಿ ಉಪಾಧ್ಯಕ್ಷ ಯೋಗೇಶ, ಮಾಜಿ ಸಚಿವರಾದ ರಮಾನಾಥ ರೈ, ಪ್ರಮೋದ ಮಧ್ವರಾಜ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ್ ಹಾಗೂ ಇನ್ನಿತರರು ಇದ್ದರು.