ಮದ್ದೂರು: ಚುನಾವಣಾ ಸಂದರ್ಭದಲ್ಲಿ ಗೊಂದಲ ಮೂಡಿಸುವ ಹೇಳಿಕೆ ನೀಡುವುದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಚಾಳಿಯಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಿಂದ ಕೆ.ಆರ್.ಪೇಟೆ ಉಪ ಚುನಾವಣೆಗೆ ಪ್ರಚಾರಕ್ಕೆ ತೆರಳುವ ಮಾರ್ಗ ಮಧ್ಯೆ ಸೋಮನಹಳ್ಳಿಯಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ದೇವೇಗೌಡರು ನೀಡುವ ಹೇಳಿಕೆಗಳು ಸತ್ಯಕ್ಕೆ ದೂರವಾಗಿದ್ದು, ಉಪ ಚುನಾವಣಾ ಬಳಿಕ ರಾಜಕೀಯ ಧ್ರುವೀಕರಣ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಉಪ ಚುನಾವಣೆಯಲ್ಲಿ 15 ಕ್ಕೆ 15 ಕ್ಷೇತ್ರವನ್ನು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಸಂಸದರ ಚುನಾವಣೆಯಲ್ಲಿ ನಾನು ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 21 ಅಥವಾ 22 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿದ್ದೆವು ಆದರೆ ಆಗ 25 ಕ್ಷೇತ್ರಗಳನ್ನು ಗೆದ್ದಿದ್ದೆವು. ಮಂಡ್ಯ ಸೇರಿ ನಮ್ಮ ಲೆಕ್ಕದಲ್ಲಿ 26 ಕ್ಷೇತ್ರಗಳನ್ನು ಗೆದ್ದಿದ್ದೇವೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ತಲಾ ಒಂದೊಂದು ಕ್ಷೇತ್ರವನ್ನು ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಉಪ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಗೆದ್ದು ಬಿಜೆಪಿ ಇತಿಹಾಸ ಸೃಷ್ಠಿಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಅವರ ಆಡಳಿತವನ್ನು ವಿಶ್ವವೇ ಮೆಚ್ಚಿದೆ, ಇಡೀ ದೇಶದಲ್ಲಿ ಕಾಂಗ್ರೆಸ್ ಅಳಿವಿನಂಚಿನಲ್ಲಿದೆ. ಇಂತಹ ಸಂದರ್ಭದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಗೊಂದಲದ ಹೇಳಿಕೆ ನೀಡುವ ಮೂಲಕ ಚುನಾವಣಾ ಗಿಮಿಕ್ ನಡೆಸುತ್ತಿದ್ದಾರೆಂದು ಟೀಕಿಸಿದರು.
ಕಿಕ್ಕೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವೇದಿಕೆಯಲ್ಲಿ ಕಣ್ಣೀರು ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಚಿಕ್ಕ ವಯಸ್ಸಿನಲ್ಲಿ 2 ಬಾರಿ ಮುಖ್ಯಮಂತ್ರಿಯಾಗಿದ್ದವರು, ಅದೇ ಸಂತೋಷದಲ್ಲಿ ಕಾಲ ಕಳೆಯ ಬೇಕು ಅದನ್ನು ಬಿಟ್ಟು ಕಣ್ಣೀರು ಸುರಿಸುವ ಸಂಸ್ಕೃತಿ ಬಿಡಬೇಕು ಎಂದು ಸಲಹೆ ನೀಡಿದರು.
ಒಕ್ಕಲಿಗರ ಪ್ರಾಬಲ್ಯವಿರುವ ಜಿಲ್ಲೆಯಲ್ಲಿ ಕಮಲ ಅರಳಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸದ ಅವರು, ಇಡೀ ದೇಶದಲ್ಲಿ ಎಲ್ಲ ಜಾತಿ ಹಾಗೂ ಧರ್ಮದವರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ರಾಜಕೀಯ ಪಕ್ಷದವರಿಗೆ ಜಾತಿ ಮತ್ತು ಧರ್ಮಗಳ ಅಂತರವಿಲ್ಲ ಎಲ್ಲರೂ ಒಂದೇ ಎಂದು ಉತ್ತರಿಸಿದರು.
ದೇವೇಗೌಡರು ಉಪ ಚುನಾವಣಾ ಬಳಿಕ ಸರ್ಕಾರ ಉರುಳುತ್ತದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಉಪ ಚುನಾವಣೆ ನಂತರ ಬಹುಮತದೊಂದಿಗೆ ಗಟ್ಟಿಯಾಗುತ್ತದೆ. ಮುಂದಿನ ಮೂರೂವರೆ ವರ್ಷಗಳು ಬಿಜೆಪಿ ಅಧಿಕಾರಿ ನಡೆಸುತ್ತದೆ ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಂತರ ಚುನಾವಣಾ ಬಗ್ಗೆ ಮಾತನಾಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಅವರು ಖಾಲಿ ಕೈಯಲ್ಲಿ ಅಧಿಕಾರ ಇಲ್ಲದೆ ಕುಳಿತಿದ್ದಾರೆ. ಅವರಿಗೆ ಇಲ್ಲ ಸಲ್ಲದ ಹೇಳಿಕೆ ನೀಡುವುದನ್ನು ಬಿಟ್ಟು ಬೇರೆ ಏನು ಕೆಲಸ ಎಂದು ಪ್ರಶ್ನಿಸಿದರು.