ಮಡಿಕೇರಿ: ನಗರದ ಪ್ರವಾಸಿತಾಣ ರಾಜಾಸೀಟ್ ಸಮೀಪದಲ್ಲಿ, ತೋಟಗಾರಿಕೆ ಇಲಾಖೆಗೆ ಸೇರಿದಜಾಗದಲ್ಲಿ ನಿರ್ಮಿಸಲುದ್ದೇಶಿಸಿರುವ ‘ಕೂರ್ಗ್ ವಿಲೇಜ್’ ಯೋಜನೆಗೆ ನಗರದ ಹಿರಿಯ ನಾಗರಿಕರು ಹಾಗೂ ಸಂಘಸಂಸ್ಥೆಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾಗಿರುವ ಮಂದಿಗೆ ಗೂಡಂಗಡಿಗಳನ್ನು ನಿರ್ಮಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕೈಗೊಂಡಿರುವ ಈ ಯೋಜನೆಗೆ ‘ಸೇವ್ ಮರ್ಕೆರಾ ಗ್ರೀನ್’ ಸಂಘಟನೆ ಹಾಗೂ ನಗರದ ಹಿರಿಯ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದು, ಸಾರ್ವಜನಿಕರಿಗೆ ಪ್ರಯೋಜವಾಗುವುದಕ್ಕಿಂತ ಅನಾನುಕೂಲವೇ ಅಧಿಕವಾಗಲಿರುವ ಈ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೇವ್ ಮರ್ಕೆರಾ ಗ್ರೀನ್ ಸಂಘಟನೆಯ ಮುಖಂಡ ಹಾಗೂ ಮಡಿಕೇರಿ ನಗರಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಹರೀಶ್ ಅವರು, ಪ್ರವಾಸಿ ತಾಣವಾದ ರಾಜಾಸೀಟ್‍ನ ಕೆಳಭಾಗದಲ್ಲಿ ರಾಜದರ್ಶನ್ ಹೊಟೇಲ್ ಸಮೀಪ ತೋಟಗಾರಿಕಾ ಇಲಾಖೆಗೆ ಸೇರಿದ ಎರಡು ಎಕರೆ ಜಾಗವಿದ್ದು, ಈ ಪ್ರದೇಶದಲ್ಲಿ ಸುಮಾರು 91 ಲಕ್ಷರೂ. ವೆಚ್ಚದಲ್ಲಿ ‘ಕೂರ್ಗ್ ವಿಲೇಜ್’ ಚಿಂತನೆಯಡಿ ಗೂಡಂಗಡಿಗಳನ್ನು ನಿರ್ಮಾಣ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಆದರೆ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ನಗರದ ಹಿರಿಯ ನಾಗರಿಕರು, ಚೇಂಬರ್ ಆಫ್‍ಕಾಮರ್ಸ್ ಸೇರಿದಂತೆ ಯಾವುದೇ ಸಂಘಸಂಸ್ಥೆಗಳ ಅಭಿಪ್ರಾಯ ಸಂಗ್ರಹಿಸದೆ, ಮಾಹಿತಿ ನೀಡದೆ, ಟೆಂಡರ್ ಕೂಡಾ ಕರೆಯದೆ ಏಕಾಏಕಿ ಕಾಮಗಾರಿ ಆರಂಭಿಸಿರುವುದು ಖಂಡನೀಯ ಎಂದರು.
ಈಗಾಗಲೇ ರಾಜಾಸೀಟ್ ರಸ್ತೆಯಲ್ಲಿ ಖಾಸಗಿ ಬಸ್‍ಗಳ ಸಂಚಾರ ಇರುವುದರಿಂದ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಇದೀಗ ಅದೇ ಮಾರ್ಗದಲ್ಲಿ ಮತ್ತೊಂದು ಪ್ರೇಕ್ಷಣಿಯ ಸ್ಥಳವನ್ನು ನಿರ್ಮಿಸುವುದರಿಂದ ಪ್ರವಾಸಿಗರ ವಾಹನಗಳು ನಿಲುಗಡೆಯಾಗಿ ಮತ್ತಷ್ಟು ಸಮಸ್ಯೆಗಳಿಗೆ ಅವಕಾಶ ನೀಡಿದಂತಾಗಲಿದೆ ಎಂದು ಹೇಳಿದರು.
ಇದೇ ಜಾಗದಲ್ಲಿ ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಗೂಡಂಗಡಿ ನಿರ್ಮಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದು, ಅದಕ್ಕೂ ಇದು ಯೋಗ್ಯವಾದ ಸ್ಥಳವಲ್ಲ. ರಾಜಾಸೀಟ್ ಬಳಿ ಈಗಾಗಲೇ ಹಲವಾರು ವರ್ಷಗಳಿಂದ ವ್ಯಾಪಾರ ಮಾಡಿಕೊಂಡಿರುವವರಿಗೆ ಅಲ್ಲಿನ ಪುಟಾಣಿರೈಲು ಮಾರ್ಗದ ಸಮೀಪ ಅಂಗಡಿಗಳನ್ನು ನಿರ್ಮಿಸಿಕೊಡಬಹುದು. ಅದನ್ನು ಬಿಟ್ಟು ಸಂತ್ರಸ್ತರಿಗೆ ಅಲ್ಲಿ ಗೂಡಂಗಡಿ ನಿರ್ಮಿಸಿಕೊಟ್ಟಲ್ಲಿ ಅವರಿಗೂ ಅದರಿಂದ ಯಾವುದೇ ಪ್ರಯೋಜವಾಗದು. ಅವರಿಗೆ ನಗರದ ಗದ್ದಿಗೆ ಸೇರಿದಂತೆ ಇತರ ಪ್ರವಾಸಿ ಕೇಂದ್ರಗಳ ಬಳಿ ಅಂಗಡಿಗಳನ್ನು ನಿರ್ಮಿಸಿಕೊಡುವುದು ಸೂಕ್ತ. ಅಲ್ಲದೆ ರಾಜಾಸೀಟ್ ಬಳಿ ಗೂಡಂಗಡಿ ನಿರ್ಮಾಣದಿಂದ ವಾಹನ ದಟ್ಟಣೆ, ಪಾರ್ಕಿಂಗ್, ಕಸದ ಸಮಸ್ಯೆಗಳು ಅಧಿಕವಾಗಲಿದೆ ಎಂದೂ ಅವರು ನುಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಸದಸ್ಯರಾದ ವಕೀಲ ಟಿ.ಎಸ್. ಬೋಪಯ್ಯ ಹಾಗೂ ಕಲಿಯಂಡ ಎ.ವಿಜು, ಪೈಕೇರ ನಂದ ಉಪಸ್ಥಿತರಿದ್ದರು.