ಮಡಿಕೇರಿ: ಮಾತೃ ಭಾಷೆಯಿಂದ ಮಾತ್ರ ಜ್ಞಾನ ವೃದ್ಧಿಯಾಗಲು ಸಾಧ್ಯ. ಆದ್ದರಿಂದ ಮಾತೃ ಭಾಷೆಯಾದ ಕನ್ನಡಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೊ ಅವರು ತಿಳಿಸಿದರು.
ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಗುರುವಾರ ನಡೆದ ದ್ವಿತೀಯ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾತೃ ಭಾಷೆಯಲ್ಲಿ ಕಲಿತಾಗ ಶಬ್ದ ಸಂಪತ್ತು ಬೆಳೆಯುತ್ತದೆ. ಇದರಿಂದ ಪಾಠವನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗುತ್ತದೆ. ಆದ್ದರಿಂದ ಮಾತೃ ಭಾಷೆಯನ್ನು ವೃದ್ಧಿಸಿಕೊಂಡು ಹೋದಲ್ಲಿ ಭಾಷಾ ಸಂಪತ್ತು ಬೆಳೆಯುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಅಭಿಪ್ರಾಯ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಹಿಂದೆ ಪುಸ್ತಕ ಓದುವುದು ಮತ್ತು ಆಟವಾಡುವ ಅಭ್ಯಾಸ ಬೆಳೆಸಿಕೊಂಡಿದ್ದರು, ಮೊಬೈಲ್ ಬಂದ ನಂತರ ಒಳ್ಳೆಯ ಪುಸ್ತಕ ಓದುವ ಅಭ್ಯಾಸ ಕಡಿಮೆಯಾಗುತ್ತಿದೆ. ಇದರಿಂದ ಭಾಷೆ ವೃದ್ಧಿಯಾಗಲು ಸಾಧ್ಯವೇ ಎಂದು ಪಿ.ಎಸ್.ಮಚ್ಚಾಡೊ ಅವರು ಪ್ರಶ್ನಿಸಿದರು.
‘ಮಾತೃ ಭಾಷೆಯು ‘ಒಡಲು ಮತ್ತು ನುಡಿ’ ಇದ್ದಂತೆ, ಒಡಲು ಮಾತೃ ಹೃದಯವಾದರೆ, ನುಡಿ ಅಕ್ಷರದ ವ್ಯಕ್ತಿತ್ವವನ್ನು ರೂಪಿಸುತ್ತದೆ. ಆದ್ದರಿಂದ ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆದು ಉನ್ನತ ಜ್ಞಾನ ಮತ್ತು ಸ್ಥಾನ ಸಂಪಾದನೆ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಕರೆ ನೀಡಿದರು.’
ಗಾಳಿಬೀಡು ನವೋದಯ ವಿದ್ಯಾಲಯದ ಶಿಕ್ಷಕರಾದ ಮಾರುತಿ ದಾಸಣ್ಣವರ್ ಮಾತನಾಡಿ ಮಾತೃ ಭಾಷೆಗೆ ಇತರ ಎಲ್ಲಾ ಭಾಷೆಗಳ ಶಬ್ದಗಳನ್ನು ಅರಗಿಸಿಕೊಳ್ಳುವ ಶಕ್ತಿ ಇದೆ. ಆದ್ದರಿಂದ ಮಾತೃ ಭಾಷೆ ಕಲಿಕೆ ಮತ್ತು ಓದುವುದಕ್ಕೆ ಪ್ರೋತ್ಸಾಹಿಸಬೇಕು. ಕನ್ನಡ ಭಾಷೆ ಮತ್ತು ಸಂಸ್ಕøತಿ ಉಳಿಸಿ, ಬೆಳೆಸಬೇಕು ಎಂದರು.
ಇಂದಿನ ತಂತ್ರಜ್ಞಾನ ಯುಗದಲ್ಲಿ ಗೊತ್ತಿಲ್ಲದೆ ಪರಭಾಷೆ ಹೇರಿಕೆಯಾಗುತ್ತಿದೆ. ಇದರಿಂದ ಸ್ಥಳೀಯ ಭಾಷೆಗಳ ಆಸ್ಮಿತೆ ಕಳೆದುಕೊಳ್ಳುವ ಆತಂಕ ಉಂಟಾಗುತ್ತಿದೆ. ಆದ್ದರಿಂದ ಮಾತೃ ಭಾಷೆಯ ಆಸ್ಮಿತೆಯನ್ನು ಉಳಿಸಬೇಕು. ತಂತ್ರಜ್ಞಾನ ಬಳಸಿಕೊಂಡು ಮಾತೃ ಭಾಷೆ ಉಳಿಸಿ, ಬೆಳೆಸಬೇಕು ಎಂದರು.
ಶರಣ ಹಾಗೂ ವಚನ ಚಳವಳಿಯು ಕನ್ನಡ ಭಾಷಾ ಸಾಹಿತ್ಯದ ಕಾಂತ್ರಿಯಾಗಿದೆ. ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ವಿ.ಕೃ.ಗೋಕಾಕ್, ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಅವರು ಬರೆದಿರುವ ಪುಸ್ತಕಗಳನ್ನು ಓದಬೇಕು. ಸಾಹಿತ್ಯ ಓದುವುದರಿಂದ ವ್ಯಕ್ತಿತ್ವದ ಗಂಭೀರತೆ ಬೆಳೆಯಲಿದೆ ಎಂದರು.
ತಾ.ಪಂ.ಇಒ ಪಿ.ಲಕ್ಷ್ಮಿ ಅವರು ಮಾತನಾಡಿ ಮಾತೃ ಭಾಷೆಯಲ್ಲಿ ಕಲಿಯುವುದರಿಂದ ಪರಿಪೂರ್ಣತೆ ಪಡೆಯಬಹುದು. ಆದ್ದರಿಂದ ನಾಡಿನ ಭಾಷೆಯಾದ ಕನ್ನಡ ಭಾಷೆಯಲ್ಲಿ ಓದಬೇಕು ಎಂದರು.
ವಿದ್ಯಾರ್ಥಿಗಳು ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕಗಳ ಅಭ್ಯಾಸದಿಂದ ಜ್ಞಾನ ಹೆಚ್ಚುತ್ತದೆ. ಕನ್ನಡ ಮಾಧ್ಯಮದಲ್ಲಿ ಓದಿ ಉನ್ನತ ಸ್ಥಾನ ಪಡೆಯಬಹುದು. ಕನ್ನಡ ನಾಡು ನುಡಿಯ ಬಗ್ಗೆ ಪ್ರೀತಿ ಇರಬೇಕು ಎಂದರು.
ಹನ್ನೊಂದು ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ, ಕನ್ನಡ ಮಾಧ್ಯಮದಲ್ಲಿಯೇ ಓದಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಅಧಿಕಾರಿಯಾಗಿದ್ದೇನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.